ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಿಜೆಪಿ ಸಂಸದ ಮನೋಜ್ ತಿವಾರಿಗೆ ದಂಡ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬೈಕ್ ರ್ಯಾಲಿಯಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಬಿಜೆಪಿ ಸಂಸದ ಮನೋಜ್ ತಿವಾರಿ ಅವರಿಗೆ ದಿಲ್ಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
ತಿವಾರಿ ಅವರು ಬುಧವಾರ 'ಹರ್ ಘರ್ ತಿರಂಗಾ' ಬೈಕ್ ರ್ಯಾಲಿಯಲ್ಲಿ ಭಾಗವಹಿಸಲು ಕೆಂಪುಕೋಟೆ ಬಳಿಗೆ ಹೆಲ್ಮೆಟ್ ಇಲ್ಲದೆ ತೆರಳಿದ್ದಾಗ ಚಲನ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ತಿವಾರಿ ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದೆ ಇರುವುದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ನಿರ್ಲಕ್ಷಿಸಬೇಡಿ ಎಂದು ಬಿಜೆಪಿ ನಾಯಕ ಸಲಹೆ ನೀಡಿದ್ದಾರೆ.
ದಂಡವನ್ನು ಪಾವತಿಸುವುದಾಗಿ ಸಂಸದ ಮನೋಜ್ ತಿವಾರಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕ ಹೆಲ್ಮೆಟ್, ಪರವಾನಗಿ ಹಾಗೂ ಮಾಲಿನ್ಯ ಮತ್ತು ನೋಂದಣಿ ಪ್ರಮಾಣಪತ್ರವಿಲ್ಲದೆ ಬೈಕ್ ಚಲಾಯಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
'ಆಝಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲು ದಿಲ್ಲಿಯಲ್ಲಿ ಐತಿಹಾಸಿಕ ಕೆಂಪು ಕೋಟೆಯಿಂದ ಸಂಸತ್ತಿನ ತನಕ ಬುಧವಾರ ನಡೆದ ಮೋಟಾರ್ ಸೈಕಲ್ ರ್ಯಾಲಿಯಲ್ಲಿ ಕೇಂದ್ರ ಸಚಿವರು ಹಾಗೂ ಹಲವಾರು ಸಂಸದರು ಭಾಗವಹಿಸಿದ್ದರು.