ಕಾಮನ್‌ವೆಲ್ತ್ ಗೇಮ್ಸ್: ಪಾಕಿಸ್ತಾನಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟ ಮೀರಾಬಾಯಿ ಚಾನು ಅಭಿಮಾನಿ

Update: 2022-08-04 15:22 GMT
Photo: Twitter/@faizanlakhani

ಬರ್ಮಿಂಗ್ಹ್ಯಾಮ್: ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ(Commonwealth Games) ಪಾಕಿಸ್ತಾನದ ನೂಹ್ ದಸ್ತಗೀರ್ ಬಟ್ (Nooh Dastagir Butt ) ಮೊದಲ ಚಿನ್ನದ ಪದಕವನ್ನು ಗೆದ್ದ ತಕ್ಷಣ ಅಭಿನಂದನಾ ಹಸ್ತವನ್ನು ಭಾರತದ ಸೂಪರ್‌ಸ್ಟಾರ್ ಮೀರಾಬಾಯಿ ಚಾನು( Mirabai Chanu) ಅವರಿಗೆ ನೀಡಿದ್ದಾರೆ. 

ಒಲಿಂಪಿಕ್ ಪದಕ ವಿಜೇತೆಯಾಗಿರುವ ಚಾನು ಭಾರತದಲ್ಲಿ ತನ್ನ ಜನಪ್ರಿಯತೆಯೊಂದಿಗೆ ನೆರೆಯ ರಾಷ್ಟ್ರದ ವೇಟ್‌ಲಿಫ್ಟರ್‌ಗಳಿಗೂ ಸಹ ಐಕಾನ್ ಆಗಿದ್ದಾರೆ.

ಪುರುಷರ 109+ ಕೆಜಿ ವಿಭಾಗದಲ್ಲಿ ದಾಖಲೆಯ 405 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದ ನಂತರ ಬಟ್ "ಅವರು (ಚಾನು) ನನ್ನನ್ನು ಅಭಿನಂದಿಸಿರುವುದು ಮತ್ತು ನನ್ನ ಕಾರ್ಯಕ್ಷಮತೆಯನ್ನು ಶ್ಲಾಘಿಸಿರುವುದು ನನಗೆ ಹೆಮ್ಮೆಯ ಕ್ಷಣವಾಗಿದೆ" ಎಂದು ಹೇಳಿದ್ದಾರೆ. 24 ವರ್ಷದ ಪಾಕಿಸ್ತಾನಿ ಎಲ್ಲಾ ಮೂರು ಗೇಮ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಸ್ನ್ಯಾಚ್‌ನಲ್ಲಿ 173, ಕ್ಲೀನ್ ಮತ್ತು ಜರ್ಕ್‌ನಲ್ಲಿ 232 ಮತ್ತು ಒಟ್ಟು 405 ಕೆಜಿ ಭಾರವನ್ನು ಎತ್ತಿದ್ದಾರೆ.

“ನಾವು ಮೀರಾಬಾಯಿಯನ್ನು ಸ್ಪೂರ್ತಿಯಾಗಿ ನೋಡುತ್ತಿದ್ದೇವೆ.” ಎಂದು ನೂಹ್‌ ಹೇಳಿದ್ದಾರೆ. 

ಇದನ್ನೂ ಓದಿ: ಐತಿಹಾಸಿಕ ಕಂಚಿನ ಪದಕ ಗೆದ್ದ ಹೈಜಂಪರ್ ತೇಜಸ್ವಿನ್ ಶಂಕರ್

ಚಾನು ಅವರ ಅಭಿಮಾನಿಯೂ ಆಗಿರುವ ನೂಹ್‌, "ನಾವು ದಕ್ಷಿಣ ಏಷ್ಯಾದ ದೇಶಗಳಿಂದಲೂ ಒಲಿಂಪಿಕ್ ಪದಕ ಗೆಲ್ಲಬಹುದು ಎಂದು ಅವರು ನಮಗೆ ತೋರಿಸಿದ್ದಾರೆ. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಾಗ ನಾವು ಅವರ ಬಗ್ಗೆ ತುಂಬಾ ಹೆಮ್ಮೆಪಟ್ಟಿದ್ದೇವೆ. ಗುರ್ದೀಪ್ ಸಿಂಗ್ ಅದೇ ವಿಭಾಗದಲ್ಲಿ ಕಂಚು ಗೆದ್ದರು ಎಂದು ಹೇಳಿದ ಬಟ್, ಸಿಂಗ್‌ ರನ್ನು ತನ್ನ ಆಪ್ತರಲ್ಲಿ ಒಬ್ಬ ಎಂದು ಪರಿಗಣಿಸಿದ್ದಾರೆ.

"ಕಳೆದ ಏಳು-ಎಂಟು ವರ್ಷಗಳಿಂದ ನಾವು ಉತ್ತಮ ಸ್ನೇಹಿತರಾಗಿದ್ದೇವೆ. ನಾವು ಕೆಲವು ಬಾರಿ ವಿದೇಶದಲ್ಲಿ ಒಟ್ಟಿಗೆ ತರಬೇತಿ ಪಡೆದಿದ್ದೇವೆ. ನಾವು ಯಾವಾಗಲೂ ಸಂಪರ್ಕದಲ್ಲಿರುತ್ತೇವೆ” ಎಂದು ಬಟ್ ಹೇಳಿದ್ದಾರೆ. 
 
“ನಾನು ಭಾರತೀಯ ಲಿಫ್ಟರ್‌ನೊಂದಿಗೆ ಸ್ಪರ್ಧಿಸುತ್ತಿದ್ದೇನೆ ಎಂದು ಅಲ್ಲ. ನಾನು ನನ್ನ ಅತ್ಯುತ್ತಮವಾದುದನ್ನು ಪ್ರದರ್ಶಿಸಿ ಇಲ್ಲಿ ಗೆಲ್ಲಲು ಬಯಸಿದ್ದೆ" ಎಂದು ಅವರು ಗುರ್ದೀಪ್ ಬಗ್ಗೆ ಬಟ್‌ ಹೇಳಿದ್ದಾರೆ. 

ಭಾರತಕ್ಕೆ ನೀಡಿದ ಎರಡು ಭೇಟಿಗಳನ್ನು ಜೀವಮಾನದ ನೆನಪುಗಳು ಎಂದು ಬಟ್‌ ಹೇಳಿದ್ದಾರೆ. ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಗಾಗಿ ಎರಡು ಬಾರಿ ಭಾರತಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದು, ಮೊದಲ ಬಾರಿಗೆ ಪುಣೆಯಲ್ಲಿ ಯೂತ್ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, 2015 ರಲ್ಲಿ ಮತ್ತು ನಂತರದ ವರ್ಷ ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟಕ್ಕಾಗಿ ಭಾರತಕ್ಕೆ ಆಗಮಿಸಿದ್ದರು.

“ನಾನು ಎರಡು ಬಾರಿ ಭಾರತಕ್ಕೆ ಬಂದಿದ್ದೇನೆ ಮತ್ತು ಪ್ರತಿ ಬಾರಿಯೂ ನನಗೆ ದೊರೆತ ಬೆಂಬಲ ಮರೆಯಲಾಗದು. ನಾನು ಮತ್ತೆ ಭಾರತಕ್ಕೆ ಹಿಂತಿರುಗಲು ಬಯಸುತ್ತೇನೆ ಎಂದು ಅವರು ಹೇಳಿದರು.

"ನನಗೆ ಪಾಕಿಸ್ತಾನಕ್ಕಿಂತ ಭಾರತದಲ್ಲಿ ಅಭಿಮಾನಿಗಳು ಜಾಸ್ತಿ ಇದ್ದಾರೆಂದು ಅನಿಸುತ್ತದೆ” ಎಂದು ಅವರು ತಮಾಷೆಯಾಗಿ ಹೇಳಿದರು.

"ಆದರೆ ನಾನು ಗುವಾಹಟಿಯಲ್ಲಿದ್ದಾಗ, ಹೋಟೆಲ್ ಸಿಬ್ಬಂದಿ ನನ್ನ ಕುಟುಂಬದಂತಾಯಿತು, ನಾನು ಹೊರಡುವಾಗ ಕಣ್ಣೀರು ಹಾಕುತ್ತಿದ್ದರು. ಆ 10-15 ದಿನಗಳಲ್ಲಿ ಬೆಳೆದ ಸಂಪರ್ಕ ಹೀಗಿತ್ತು. ನಾನು ಪಾಕಿಸ್ತಾನದಿಂದ ಬಂದವನು ಅಥವಾ ಅವರ ಶತ್ರು ಎಂದು ಅವರು ನನಗೆ ಎಂದಿಗೂ ಅನಿಸಲಿಲ್ಲ” ಎಂದು ನೂಹ್‌ ಬಟ್‌ ಹೇಳಿದ್ದಾರೆ.

ಆ ಚಾಂಪಿಯನ್‌ಶಿಪ್‌ ನಡೆದು ಆರು ವರ್ಷಗಳು ಕಳೆದಿವೆ, ಆದರೂ, ಬಟ್ ಗೆ ಮತ್ತೆ ಭಾರತಕ್ಕೆ ಭೇಟಿ ನೀಡಲು ಆಸೆ ಪಡುತ್ತಿದ್ದಾರೆ. ”ಖಂಡಿತವಾಗಿಯೂ, ನಾನು ಮತ್ತೊಮ್ಮೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ. ಭಾರತದಲ್ಲಿ ನಾನು ಆನಂದಿಸಿದ ರೀತಿಯಲ್ಲಿ ನಾನು ಯಾವುದೇ ಸ್ಪರ್ಧೆಯನ್ನು ಆನಂದಿಸಲಿಲ್ಲ” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News