ಮಲ್ಲಿಕಾರ್ಜುನ ಖರ್ಗೆಗೆ ಈ.ಡಿ. ಸಮನ್ಸ್ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಕೋಲಾಹಲ
ಹೊಸದಿಲ್ಲಿ,ಆ.4: ಸರಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯಿಂದಾಗಿ ಸಂಸತ್ತಿನಲ್ಲಿ ಗುರುವಾರ ಭಾರೀ ಕೋಲಾಹಲ ಸೃಷ್ಟಿಯಾಗಿದ್ದು,ಅಂತಿಮವಾಗಿ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂದೂಡುವಂತಾಯಿತು.
ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ಸರಕಾರವು ರಾಜಕೀಯ ಪ್ರತೀಕಾರಕ್ಕಾಗಿ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದಾಗ,ಆಡಳಿತ ಪಕ್ಷದ ಸದಸ್ಯರು ಅದನ್ನು ಬಲವಾಗಿ ವಿರೋಧಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ತನಗೆ ಜಾರಿಗೊಳಿಸಲಾದ ಸಮನ್ಸ್‌ನ್ನು ಪ್ರಸ್ತಾಪಿಸಿದ ಖರ್ಗೆ,ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಅವರು ಹೇಗೆ ಸಮನ್ಸ್ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಈ.ಡಿ.ಬುಧವಾರ ದಿಲ್ಲಿಯ ಹೆರಾಲ್ಡ್ ಹೌಸ್‌ನಲ್ಲಿಯ ಯಂಗ್ ಇಂಡಿಯನ್ ಕಚೇರಿಗೆ ಬೀಗಮುದ್ರೆ ಹಾಕಿತ್ತು. ಖರ್ಗೆ ಕಂಪನಿಯ ಅಧಿಕೃತ ಪ್ರತಿನಿಧಿಯಾಗಿದ್ದಾರೆ. ಖರ್ಗೆ ಉಪಸ್ಥಿತರಿಲ್ಲದ್ದರಿಂದ ತಾವು ಯಂಗ್ ಇಂಡಿಯನ್ ಕಚೇರಿಗೆ ಬೀಗಮುದ್ರೆ ಹಾಕಿದ್ದೇವೆ ಎಂದು ಈ.ಡಿ.ಅಧಿಕಾರಿಗಳು ಹೇಳಿದ್ದಾರೆ.
‘ಮಧ್ಯಾಹ್ನ 12:30ಕ್ಕೆ ನಾನು ಈ.ಡಿ.ಮುಂದೆ ಹಾಜರಾಗಬೇಕಿದೆ. ನಾನು ಕಾನೂನನ್ನು ಅನುಸರಿಸಲು ಬಯಸುತ್ತೇನೆ. ಆದರೆ ಸಂಸತ್ ಅಧಿವೇಶನದ ನಡುವೆ ನನಗೆ ಸಮನ್ಸ್ ನೀಡುವುದು ಸೂಕ್ತವೇ? ಬುಧವಾರ ಪೊಲೀಸರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿವಾಸಗಳನ್ನು ಸುತ್ತುವರಿದಿದ್ದರು. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವವು ಬದುಕುಳಿಯುತ್ತದೆಯೇ? ನಾವು ಸಂವಿಧಾನದಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆಯೇ? ನಾವು ಹೆದರುವುದಿಲ್ಲ,ನಾವು ಇದರ ವಿರುದ್ಧ ಹೋರಾಡುತ್ತೇವೆ ’ಎಂದು ಖರ್ಗೆ ಹೇಳಿದರು.
ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸದನ ನಾಯಕ ಬಿಜೆಪಿಯ ಪಿಯೂಷ ಗೋಯಲ್ ಅವರು,ಯಾವುದೇ ಕಾನೂನು ಜಾರಿ ಸಂಸ್ಥೆಯ ಕೆಲಸದಲ್ಲಿ ಸರಕಾರವು ಹಸ್ತಕ್ಷೇಪ ಮಾಡುವುದಿಲ್ಲ. ಅವರ (ಕಾಂಗ್ರೆಸ್) ಆಡಳಿತದಲ್ಲಿ ಹಾಗೆ ಸಂಭವಿಸುತ್ತಿದ್ದಿರಬಹುದು. ಈಗ ಯಾರಾದರೂ ಏನಾದರೂ ತಪ್ಪು ಮಾಡಿದರೆ ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತವೆ ಎಂದು ಹೇಳಿದರು.
ಇದು ಉಭಯ ಕಡೆಗಳ ಸಂಸದರ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಗಿತ್ತು.
ಖರ್ಗೆ ಕೋರಿರುವ ವಿಷಯದಲ್ಲಿ ಚರ್ಚೆಗೆ ತಾನು ಒಪ್ಪಿಕೊಂಡಿಲ್ಲ ಎಂದು ಹೇಳಿದ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕಲಾಪಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.
ಬೆಳಿಗ್ಗೆ ಕಲಾಪಗಳು ಆರಂಭಗೊಂಡ ಬೆನ್ನಿಗೇ ನಾಯ್ಡು,ನಿಯಮ 267ರಡಿ ತನಿಖಾ ಸಂಸ್ಥೆಗಳ ದುರುಪಯೋಗ ಕುರಿತು ಖರ್ಗೆಯವರ ನೋಟಿಸ್ ಸೇರಿದಂತೆ ಸದಸ್ಯರಿಂದ ಐದು ನೋಟಿಸ್‌ಗಳನ್ನು ತಾನು ಸ್ವೀಕರಿಸಿದ್ದೇನೆ,ಆದರೆ ಯಾವುದನ್ನೂ ಅನುಮತಿಸಿಲ್ಲ ಎಂದು ತಿಳಿಸಿದರು. ಆದಾಗ್ಯೂ ನಾಯ್ಡು ಖರ್ಗೆಯವರಿಗೆ ಅವರು ಎತ್ತಲು ಬಯಸಿದ್ದ ವಿಷಯವನ್ನು ಉಲ್ಲೇಖಿಸಲು ಅವಕಾಶ ನೀಡಿದರು.
ಖರ್ಗೆ ವಿಷಯವನ್ನು ಉಲ್ಲೇಖಿಸುತ್ತಿದ್ದಂತೆ ಉಭಯ ಕಡೆಗಳ ನಡುವೆ ಬಿರುಸಿನ ವಾಗ್ಯುದ್ಧ ಆರಂಭಗೊಂಡಿತು. ಈ ಹಿನ್ನೆಲೆಯಲ್ಲಿ ನಾಯ್ಡು ಸದನವನ್ನು ಮುಂದೂಡಿದರು. ಸದನವು ಮರುಸಮಾವೇಶಗೊಂಡ ಬಳಿಕವೂ ಕೋಲಾಹಲ ಮುಂದುವರಿದಿದ್ದರಿಂದ ದಿನದ ಮಟ್ಟಿಗೆ ಮುಂದೂಡಲಾಯಿತು.
ಅತ್ತ ಲೋಕಸಭೆಯೂ ಪ್ರತಿಪಕ್ಷ ಸದಸ್ಯರ ಪ್ರತಿಭಟನೆಯಿಂದಾಗಿ ಕೋಲಾಹಲಕ್ಕೆ ಸಾಕ್ಷಿಯಾಗಿತ್ತು.
ಬೆಳಿಗ್ಗೆ ಸದನವು ಸಮಾವೇಶಗೊಂಡ ಬೆನ್ನಿಗೇ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ಸದಸ್ಯರು ಈ.ಡಿ.ಕ್ರಮ,ಬೆಲೆಏರಿಕೆ,ಜಿಎಸ್‌ಟಿ ಮತ್ತು ಇತರ ವಿಷಯಗಳನು ಪ್ರಸ್ತಾವಿಸಲು ಬಯಸಿದರು.
ಕಾಂಗ್ರೆಸ ಸದಸ್ಯರು ಈ.ಡಿ.ಕ್ರಮವನ್ನು ಮತ್ತು ಬೆಲೆ ಏರಿಕೆಯನ್ನು ವಿರೋಧಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತ ಸದನದ ಬಾವಿಯಲ್ಲಿ ನೆರೆದ ಬಳಿಕ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು. ಪ್ರತಿಪಕ್ಷ ಸದಸ್ಯರ ಘೋಷಣೆಗಳ ನಡುವೆಯೇ 11:30ರವರೆಗೆ ಪ್ರಶ್ನೆವೇಳೆ ಕಲಾಪಗಳು ನಡೆದಿದ್ದು,ಐದು ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.
ಮಧ್ಯಾಹ್ನ ಎರಡು ಗಂಟೆಗೆ ಸದನವು ಮರು ಸಮಾವೇಶಗೊಂಡಾಗ ಕಾಗದ ಪತ್ರಗಳನ್ನು ಮಂಡಿಸಲಾಯಿತು ಮತ್ತು ಕಾಂಗ್ರೆಸ್ ಸದಸ್ಯರ ಮುಂದುವರಿದ ಘೋಷಣೆಗಳ ನಡುವೆಯೇ ಎರಡು ನಿರ್ಣಯಗಳು ಅಂಗೀಕಾರಗೊಂಡವು.
ಪೀಠದಲ್ಲಿದ್ದ ಕಿರೀಟ ಸೋಳಂಕಿ ಅವರು ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಸದನದ ಕಲಾಪಗಳಿಗೆ ಅವಕಾಶ ನೀಡುವಂತೆ ಪ್ರತಿಭಟನಾನಿರತ ಸದಸ್ಯರನ್ನು ಕೋರಿಕೊಂಡರು. ಆದಾಗ್ಯೂ ಪ್ರತಿಭಟನೆಗಳು ಮಂದುವರಿದಾಗ ಅವರು ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.