ಬೆಲೆ ಏರಿಕೆ, ನಿರುದ್ಯೋಗ, ಜಿಎಸ್ ಟಿ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ನಿಂದ ದಿಲ್ಲಿಯಲ್ಲಿ ಪ್ರತಿಭಟನೆ

Update: 2022-08-05 07:26 GMT
Photo:PTI

ಹೊಸದಿಲ್ಲಿ: ಬೆಲೆ ಏರಿಕೆ, ನಿರುದ್ಯೋಗ ಹಾಗೂ ಅವಶ್ಯಕ ವಸ್ತುಗಳ ಮೇಲೆ ಜಿಎಸ್ ಟಿ ಏರಿಕೆಯನ್ನು ವಿರೋಧಿಸಿ  ಕಾಂಗ್ರೆಸ್ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್  ಪ್ರತಿಭಟನೆಯನ್ನು (Congress' protest) ನಡೆಸಿದೆ. ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾದರು. ಕಾಂಗ್ರೆಸ್  ಅಧಿನಾಯಕಿ ಸೋನಿಯಾ ಗಾಂಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳು ಹಾಗೂ  ಹಿರಿಯ ನಾಯಕರು “ಪಿಎಂ ಹೌಸ್ ಘೇರಾವ್’’ ನಲ್ಲಿ ("Gherao PM's Home")ಭಾಗವಹಿಸಲಿದ್ದಾರೆ. ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರುಗಳು ಸಂಸತ್ತಿನಿಂದ “ಚಲೋ ರಾಷ್ಟ್ರಪತಿ ಭವನ್’’ ನಡೆಸಲಿದ್ದಾರೆ ಎಂದು ಪಕ್ಷವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ದಿಲ್ಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ  ಕೂಡ ಹಣದುಬ್ಬರ, ಬೆಲೆ ಏರಿಕೆ, ಜಿಎಸ್‌ಟಿ ಹಾಗೂ  ನಿರುದ್ಯೋಗ ಸಮಸ್ಯೆಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಿದ್ದಾರೆ. ಅರೆಸೇನಾ ಪಡೆಗಳು ಹಾಗೂ ದಿಲ್ಲಿ  ಪೊಲೀಸರು ವಿಜಯ್ ಚೌಕ್ ರಸ್ತೆ ಹಾಗೂ  ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಹೋಗುವ ಮಾರ್ಗವನ್ನು ಬ್ಯಾರಿಕೇಡ್‌ಗಳ ಮೂಲಕ ನಿರ್ಬಂಧಿಸಿದ್ದಾರೆ.

ಹಣದುಬ್ಬರ ಹಾಗೂ  ನಿರುದ್ಯೋಗವನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು  ವಿಜಯ್ ಚೌಕ್ ಹೊರಗೆ ತಡೆದು ನಿಲ್ಲಿಸಲಾಗಿದೆ. ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ ಹಾಗೂ  ಕೆ.ಸಿ. ವೇಣುಗೋಪಾಲ್ ಸಂಸತ್ತಿನ ಹೊರಗೆ ಧರಣಿ ಕುಳಿತಿದ್ದಾರೆ.

  ಪ್ರತಿಭಟನೆಗೆ ಮೊದಲು ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ,  "ನಾವು ಪ್ರಜಾಪ್ರಭುತ್ವದ ಸಾವಿಗೆ ಸಾಕ್ಷಿಯಾಗಿದ್ದೇವೆ. ಸುಮಾರು ಒಂದು ಶತಮಾನದ ಹಿಂದೆ ಭಾರತವನ್ನು ಒಂದೊಂದೆ ಇಟ್ಟಿಗೆ ಇಟ್ಟು ನಿರ್ಮಿಸಲಾಗಿತ್ತು.ಈಗ ಅದು ನಿಮ್ಮ ಕಣ್ಣುಗಳ ಮುಂದೆ ನಾಶವಾಗುತ್ತಿದೆ. ಸರ್ವಾಧಿಕಾರದ ಕಲ್ಪನೆಯ ವಿರುದ್ಧ ನಿಂತಿರುವವರ ಮೇಲೆ   ಕೆಟ್ಟದ್ದಾಗಿ ಆಕ್ರಮಣ ಮಾಡಲಾಗುತ್ತದೆ, ಜೈಲಿಗೆ ಹಾಕಲಾಗುತ್ತದೆ, ಬಂಧಿಸಲಾಗುತ್ತದೆ ಹಾಗೂ  ಥಳಿಸಲಾಗುತ್ತದೆ''  ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News