ಸರಕಾರದಿಂದ ಮಲತಾಯಿ ಧೋರಣೆ ಆರೋಪ : ಮೀನುಗಾರರಿಂದ ಪ್ರತಿಭಟನೆ

Update: 2022-08-05 15:47 GMT

ಬೈಂದೂರು, ಆ.5: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಶಿರೂರಿನಲ್ಲಿ ದೋಣಿಗಳು ಕೊಚ್ಚಿಕೊಂಡು ಹೋಗಿ ಕೋಟ್ಯಾಂತರ ರೂ. ನಷ್ಟ ಸಂಭವಿಸಿದ್ದರೂ ಜಿಲ್ಲಾಡಳಿತ, ಸಂಸದರು, ಮೀನುಗಾರಿಕ ಸಚಿವರು ಮತ್ತು ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿಸಿದ್ದಾರೆಂದು ಆರೋಪಿಸಿ ಉಪ್ಪುಂದದ ಮೀನುಗಾರರು ಶುಕ್ರವಾರ ಬೈಂದೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೈಂದೂರು ವಲಯ ನಾಡ ದೋಣಿ ಮಾಜಿ ಅಧ್ಯಕ್ಷ ಮದನ್ ಕುಮಾರ್ ಮಾತನಾಡಿ, ಮೀನುಗಾರಿಕೆ ನಡೆಸಿ ಶಿರೂರಿನ ಅಳಿವೆಗದ್ದೆಯಲ್ಲಿ ಲಂಗರು ಹಾಕಿರುವ 50ಕ್ಕೂ ಹೆಚ್ಚು ದೋಣಿಗಳು ಸಮುದ್ರ ಪಾಲಾಗಿ ಹಲವು ದೋಣಿಗಳು ಹಾನಿಯಾಗಿವೆ. ಯಾವುದೇ ಸಚಿವರಾಗಲಿ, ಸಂಸದ, ಸ್ಥಳೀಯ ಶಾಸಕರು ಇತ್ತ ಕಡೆ ಗಮನ ಹರಿಸದೆ ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಕ್ಕದ ಭಟ್ಕಳಕ್ಕೆ ಬಂದಿದ್ದ ಮುಖ್ಯಮಂತ್ರಿ ಹಾಗೂ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳು ಶಿರೂರಿಗೆ ಆಗಮಿಸದೆ ಇಲ್ಲಿನ ಮೀನುಗಾರರನ್ನು ಕಡೆಗಣಿಸಿದ್ದಾರೆ  ಎಂದು ಆರೋಪಿಸಿದರು.

ಮೀನುಗಾರರು ಬೇರೆ ಬೇರೆ ಪಕ್ಷ, ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಮೀನುಗಾರರ ಸಮಸ್ಯೆ ಬಂದಾಗ ಎಲ್ಲವನ್ನೂ ಪಕ್ಷ ಮೀರಿ ಒಗ್ಗಟ್ಟಾಗುತ್ತೇವೆ. ನಮ್ಮ ಸಹನೆಯನ್ನು ಪರೀಕ್ಷಿಸುವ ಕೆಲಸ ಯಾರೊಬ್ಬರೂ ಮಾಡಬಾರದು. ಶಿರೂರು ಭಾಗದಲ್ಲಿ ನಡೆದ ನಷ್ಟಕ್ಕೆ ಸರಿಯಾದ ಪರಿಹಾರ ದೊರಕಿಸಿ ಕೊಡಬೇಕು. ಇಲ್ಲದಿದ್ದರೇ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

‘ನಮಗೆ ಸರಿಯಾದ ಬಂದರು ವ್ಯವಸ್ಥೆ ಇಲ್ಲ. ನಮ್ಮನ್ನು ರಸ್ತೆಗೆ ಇಳಿಸಬೇಡಿ. ನಮ್ಮ ತಾಳ್ಮೆಗೆ ಒಂದು ಮೀತಿ ಇದೆ. ಇನ್ನೂ ಹತ್ತು ದಿನದ ಒಳಗೆ ಇನ್ನೊಂದು ಪ್ರತಿಭಟನೆಗೆ  ಅವಕಾಶ ನೀಡಬೇಡಿ ಎಂದು ಮೀನುಗಾರರು ಸರಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಬಳಿಕ ಈ ಕುರಿತ ಮನವಿಯನ್ನು ಬೈಂದೂರು ತಾಲೂಕು ತಹಸಿಲ್ದಾರ್ ಕೀರಣ್ ಗೌರಯ್ಯ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಜಗದೀಶ್ ಕುಮಾರ್, ಸಾಮಾಜಿಕ ಹೋರಾಟಗಾರ ಸುಬ್ರಹ್ಮಣ್ಯ ಬಿಜೂರು, ಮೀನುಗಾರ ಮುಖಂಡರಾದ ಜಗನ್ನಾಥ, ಕುಮಾರ ಖಾರ್ವಿ, ತಿಮ್ಮಪ್ಪಖಾರ್ವಿ, ನಾಗರಾಜ ಖಾರ್ವಿ, ಕೆ.ನಾಗೇಶ್ ಖಾರ್ವಿ, ಬಿ.ದಾಮೋದರ ಖಾರ್ವಿ, ಬಿ.ಭಾಸ್ಕರ ಖಾರ್ವಿ, ಡಿ.ರಾಮಚಂದ್ರ ಖಾರ್ವಿ, ನಾಗೇಶ ಖಾರ್ವಿ ಸೇರಿದಂತೆ ಸಾವಿರಾರು ಮಂದಿ ಮೀನುಗಾರರು ಭಾಗವಹಿಸಿದ್ದರು.

"ಪ್ರತಿ ಬಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಸಭೆ ಸೇರಿ ಭರವಸೆ ನೀಡುತ್ತಿದ್ದಾರೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ. ಕೋಟ್ಯಾಂತರ ನಷ್ಟವಾದ ಸಂದರ್ಭದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ. ನಾವು ಕೇಳಿದರೆ ಕಾನೂನು ತೊಡಕುಗಳನ್ನು ತಂದಿಟ್ಟು ಪರಿಹಾರ ಸಿಗದಂತೆ ಮಾಡುತ್ತಾರೆ. ಶಿರೂರು ಘಟನೆಯ ಸಂದರ್ಭದಲ್ಲಿ ಯಾರೊಬ್ಬರೂ ಸ್ಪಂದಿಸಿಲ್ಲ. ಪಕ್ಕದ ಭಟ್ಕಳಕ್ಕೆ ಬರುವ ಮುಖ್ಯಮಂತ್ರಿಗಳು, ಶಿರೂರು ಭಾಗದಲ್ಲಿ ಆದ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ. ಮೀನುಗಾರರನ್ನು ಇಷ್ಟು ಹಗುರವಾಗಿ ಪರಿಗಣಿಸುವುದು ಸರಿಯಲ್ಲ".
-ವೆಂಕಟರಣ ಖಾರ್ವಿ, ಮೀನುಗಾರ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News