ಎಲೆಕ್ಟ್ರಾನಿಕ್ ಸಾಧನಗಳ ವಶ:‌ ಮಾರ್ಗಸೂಚಿ ಕೋರಿದ ಅರ್ಜಿಗೆ ಹೊಸ ಉತ್ತರ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2022-08-05 16:26 GMT

ಹೊಸದಿಲ್ಲಿ,ಆ.5: ವೈಯಕ್ತಿಕ ಡಿಜಿಟಲ್ ಮತ್ತು ವಿದ್ಯುನ್ಮಾನ ಸಾಧನಗಳು ಹಾಗೂ ಅವುಗಳಲ್ಲಿಯ ವಿಷಯಗಳ ವಶ,ಪರಿಶೀಲನೆ ಮತ್ತು ಸಂರಕ್ಷಣೆಗಾಗಿ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಶಿಕ್ಷಣ ತಜ್ಞರ ಗುಂಪೊಂದು ಸಲ್ಲಿಸಿರುವ ಅರ್ಜಿಗೆ ಹೊಸದಾಗಿ ಉತ್ತರವನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರಕ್ಕೆ ಸೂಚಿಸಿದೆ.

‘ಸಲ್ಲಿಸಲಾಗಿರುವ ಉತ್ತರವು ನಮಗೆ ತೃಪ್ತಿ ನೀಡಿಲ್ಲ ಮತ್ತು ಹೊಸ ಹಾಗೂ ಸೂಕ್ತ ಉತ್ತರವನ್ನು ನಾವು ಬಯಸಿದ್ದೇವೆ ’ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ ಅವರ ಪೀಠವು ಆದೇಶಿಸಿತು.

ಮಾಜಿ ಜೆಎನ್ಯು ಪ್ರೊಫೆಸರ್ ರಾಮ ರಾಮಸ್ವಾಮಿ,ಸಾವಿತ್ರಿಬಾಯಿ ಫುಲೆ ಪುಣೆ ವಿವಿಯ ಪ್ರೊ.ಸುಜಾತಾ ಪಟೇಲ,ಹೈದರಾಬಾದ್ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿವಿಯ ಪ್ರೊ.ಮಾಧವ ಪ್ರಸಾದ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊ.ಮುಕುಲ ಕೇಸವಾನ್ ಹಾಗೂ ಸೈದ್ಧಾಂತಿಕ ಪರಿಸರ ಅರ್ಥಶಾಸ್ತ್ರಜ್ಞ ದೀಪಕ್ ಮಲ್ಘಾನ್ ಅವರು ಈ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯು ಅಂಗೀಕಾರಾರ್ಹವಲ್ಲ ಎಂದು ಕೇಂದ್ರ ಸರಕಾರವು ತನ್ನ ಕೌಂಟರ್ ಅಫಿಡವಿಟ್ನಲ್ಲಿ ಹೇಳಿತ್ತು.

ಕೌಂಟರ್ ಅಫಿಡವಿಟ್ ಪೂರ್ಣವಾಗಿಲ್ಲ. ಅಂಗೀಕಾರಾರ್ಹವಲ್ಲ ಇತ್ಯಾದಿಗಳನ್ನು ಹೇಳಿದರೆ ಸಾಲದು. ದಯವಿಟ್ಟು ನೀವೇ ಖುದ್ದಾಗಿ ಇದನ್ನು ಪರಿಶೀಲಿಸಿ ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರಿಗೆ ಸೂಚಿಸಿತು.

ಮುಂದಿನ ವಿಚಾರಣೆಯು ಸೆ.26ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News