ತೈವಾನ್ ನಲ್ಲಿ ಬೇಜವಾಬ್ದಾರಿಯ ಕೃತ್ಯ: ಚೀನಾ ರಾಯಭಾರಿಗೆ ಅಮೆರಿಕದ ಸಮನ್ಸ್

Update: 2022-08-05 17:17 GMT

ವಾಷಿಂಗ್ಟನ್, ಆ.5: ತೈವಾನ್ಗೆ ಅಮೆರಿಕದ ಸಂಸತ್ ಸ್ಪೀಕರ್ ಪೆಲೋಸಿ ಭೇಟಿ ನೀಡಿದ ತರುವಾಯ ದ್ವೀಪರಾಷ್ಟ್ರದ ಸುತ್ತಮುತ್ತ ಚೀನಾ ನಡೆಸುತ್ತಿರುವ ಸಮರಾಭ್ಯಾಸಗಳ ಹಿನ್ನೆಲೆಯಲ್ಲಿ, ಅಮೆರಿಕಕ್ಕೆ ಚೀನಾದ ರಾಯಭಾರಿ ಕ್ವಿನ್ ಗಾಂಗ್ರನ್ನು ಶ್ವೇತಭವನಕ್ಕೆ ಕರೆಸಿಕೊಂಡು ಖಂಡನೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಜಾನ್ ಕಿರ್ಬಿ ಶುಕ್ರವಾರ ಹೇಳಿದ್ದಾರೆ.

 
ತೈವಾನ್ ಜಲಸಂಧಿಯುದ್ದಕ್ಕೂ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ನಮ್ಮ ದೀರ್ಘಾವಧಿಯ ಉದ್ದೇಶಕ್ಕೆ ಅಡ್ಡಿಯಾಗಿರುವ ಚೀನಾದ ಪ್ರಚೋದನಕಾರಿ ಮತ್ತು ಬೇಜವಾಬ್ದಾರಿಯ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಕಿರ್ಬಿ ಹೇಳಿದ್ದಾರೆ. ಚೀನಾದ ಕೃತ್ಯಗಳು ತೈವಾನ್ಗೆ, ನಮಗೆ ಮಾತ್ರವಲ್ಲ, ವಿಶ್ವದಾದ್ಯಂತದ ನಮ್ಮ ಪಾಲುದಾರರಿಗೆ ಆತಂಕಕ್ಕೆ ಕಾರಣವಾಗಿದೆ ಎಂಬುದನ್ನು ಚೀನಾದ ರಾಯಭಾರಿಗೆ ಸ್ಪಷ್ಟಪಡಿಸಿದ್ದೇವೆ. ಅಂತಿಮವಾಗಿ, ನಮ್ಮ ಒಂದು ಚೀನಾ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದನ್ನೂ ಅವರಿಗೆ ಸ್ಪಷ್ಟಪಡಿಸಿದ್ದೇವೆ ಎಂದು ಕಿರ್ಬಿ ಹೇಳಿದ್ದಾರೆ. ಇದರರ್ಥ, ತೈವಾನ್ ಚೀನಾದ ಭಾಗ ಎಂದು ಒಪ್ಪಿಕೊಳ್ಳುವುದು, ಆದರೆ ಯಥಾಸ್ಥಿತಿಯನ್ನು ಬದಲಾಯಿಸಲು ಬಲಪ್ರಯೋಗಿಸುವುದನ್ನು ವಿರೋಧಿಸುವುದು. ಚೀನಾ ಏನು ಮಾಡಬೇಕೆಂದು ಬಯಸಿದೆಯೋ ಅದಕ್ಕೆ ಅಮೆರಿಕ ಸಿದ್ಧವಾಗಿದೆ. ನಾವು ಬಿಕ್ಕಟ್ಟನ್ನು ಸೃಷ್ಟಿಸಲು ಅಥವಾ ಹುಡುಕಲು ಪ್ರಯತ್ನಿಸುತ್ತಿಲ್ಲ ಎಂಬುದನ್ನೂ ಚೀನಾಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ಕಿರ್ಬಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News