ಗಾಝಾದಲ್ಲಿ ಇಸ್ರೇಲ್ ವಾಯುದಾಳಿ: 15ಕ್ಕೂ ಹೆಚ್ಚು ಮಂದಿ ಮೃತ್ಯು

Update: 2022-08-06 03:14 GMT

ಗಾಝಾ ಸಿಟಿ: ನಗರದಲ್ಲಿ ಇಸ್ರೇಲ್ ಶುಕ್ರವಾರ ನಡೆಸಿದ ವಾಯುದಾಳಿಯಲ್ಲಿ ಸಂಘಟನೆಯ ಮುಖಂಡ ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಈ ಪ್ರದೇಶದಲ್ಲಿ ರಾಕೆಟ್ ದಾಳಿ ಕೂಡಾ ನಡೆದಿದೆ ಎಂದು ndtv.com ವರದಿ ಮಾಡಿದೆ.

ಇಸ್ಲಾಮಿಕ್ ಜಿಹಾದ್ ಸಂಘಟನೆಯ ಮೇಲೆ ಪೂರ್ವನಿಯೋಜಿತ ದಾಳಿ ನಡೆಸಲಾಗಿದ್ದು, ಇಸ್ರೇಲ್‍ನಲ್ಲಿ ಇತ್ತೀಚೆಗೆ ನಡೆದ ಹಲವು ದಾಳಿಗಳಲ್ಲಿ ಷಾಮೀಲಾಗಿದ್ದ ಪ್ಯಾಲೆಸ್ತೀನ್ ಉಗ್ರ ಗುಂಪಿನ ಅಗ್ರ ಕಮಾಂಡರ್‌ ನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್‍ನ ಬಾಂಬ್ ದಾಳಿಯನ್ನು ಯುದ್ಧದ ಘೋಷಣೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಇಸ್ಲಾಮಿಕ್ ಜಿಹಾದ್ ಹೇಳಿದೆ. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿರುವ ಸಂಘಟನೆ 100ಕ್ಕೂ ಹೆಚ್ಚು ರಾಕೆಟ್‍ಗಳ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಆದರೆ ಇಸ್ರೇಲ್‍ನಲ್ಲಿ ಸಂಭವಿಸಿದ ಸಾವು ನೋವುಗಳ ಬಗ್ಗೆ ವಿವರ ತಿಳಿದು ಬಂದಿಲ್ಲ. ನಗರದ ಬಾಂಬ್ ಶೆಲ್ಟರ್‌ ಗಳನ್ನು ತೆರೆಯಲಾಗಿದೆ ಎಂದು ಟೆಲ್ ಅವೀವ್ ಅಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್ ದಾಳಿಯಿಂದ ಮೃತಪಟ್ಟವರಲ್ಲಿ ಸಣ್ಣ ಮಗು ಕೂಡಾ ಸೇರಿದೆ ಎಂದು ಹಮಾಸ್ ಇಸ್ಲಾಮಿಕ್ ಚಳವಳಿ ನಡೆಸುತ್ತಿರುವ ಸರ್ಕಾರದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. 2007ರಲ್ಲಿ ಗಾಝಾವನ್ನು ನಿಯಂತ್ರಣಕ್ಕೆ ಪಡೆದ ಬಳಿಕ ಹಮಾಸ್ ಇಸ್ರೇಲ್ ಜತೆಗೆ ಏಳು ಯುದ್ಧಗಳನ್ನು ನಡೆಸಿದೆ. ಇಸ್ಲಾಮಿಕ್ ಜಿಹಾದ್ ಪ್ರತ್ಯೇಕ ಸಂಘಟನೆಯಾಗಿದ್ದರೂ ಹಮಾಸ್ ಜತೆ ಗುರುತಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News