ಕಾಮನ್ ವೆಲ್ತ್ ಗೇಮ್ಸ್: ಒಂದೇ ದಿನ ಮೂರು ಚಿನ್ನಸಹಿತ 6 ಪದಕಗಳನ್ನು ಜಯಿಸಿದ ಭಾರತದ ಕುಸ್ತಿಪಟುಗಳು

Update: 2022-08-06 14:21 GMT
ದೀಪಕ್ ಪುನಿಯಾ, Photo: twitter

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಶುಕ್ರವಾರ ಒಂದೇ ದಿನ ಭಾರತದ ಕುಸ್ತಿಪಟುಗಳು  ಮೂರು ಚಿನ್ನದ ಪದಕಗಳ ಸಹಿತ ಒಟ್ಟು 6 ಪದಕಗಳನ್ನು ಬಾಚಿಕೊಂಡಿದ್ದಾರೆ.

ದೀಪಕ್ ಪುನಿಯಾ ಪುರುಷರ ಫ್ರೀಸ್ಟೈಲ್ 86 ಕೆಜಿ ವಿಭಾಗದ ಫೈನಲ್ ನಲ್ಲಿ ಜಯಶಾಲಿಯಾಗಿ ಭಾರತವು 'ಹ್ಯಾಟ್ರಿಕ್' ಚಿನ್ನ ಜಯಿಸಲು ನೆರವಾದರು.

ದೀಪಕ್ ಪುನಿಯಾ ಕೇವಲ ಒಂದು ಅಂಕ ಕಳೆದುಕೊಂಡು ಚಿನ್ನ ಜಯಿಸಿದರು. ಫೈನಲ್ ಹಾದಿಯಲ್ಲಿ ನ್ಯೂಝಿಲ್ಯಾಂಡ್ ನ ಕ್ಲೆ ಒಕ್ಸೆನ್ ಹ್ಯಾಮ್ ಹಾಗೂ ಕೆನಡಾದ ಅಲೆಕ್ಸಾಂಡರ್ ಮೂರೆ ಅವರನ್ನು ಸೋಲಿಸಿದರು. ಫೈನಲ್ ನಲ್ಲಿ ಪಾಕಿಸ್ತಾನದ ಮುಹಮ್ಮದ್ ಇನಾಮ್ ವಿರುದ್ಧ 3-0 ಅಂತರದಿಂದ ಸುಲಭ ಜಯ ಸಾಧಿಸಿದರು.

ಹುಟ್ಟುಹಬ್ಬದ ದಿನದಂದೇ ಅನ್ಶು ಮಲಿಕ್(57ಕೆಜಿ)ತನ್ನ ಮೊದಲ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಗಮನ ಸೆಳೆದರು.

ದಿವ್ಯಾ ಕಾಕ್ರನ್ ಪ್ಲೇ ಆಫ್ ನಲ್ಲಿ 68 ಕೆಜಿ ವಿಭಾಗದಲ್ಲಿ, ಮೋಹಿತ್ ಗ್ರೆವಾಲ್ 125 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು.

ಒಂದೇ ದಿನ 3 ಚಿನ್ನ ಜಯಿಸಿದ ಭಾರತವು ಪದಕ ಪಟ್ಟಿಯಲ್ಲಿ ಸ್ಕಾಟ್ಲೆಂಡ್ ಅನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.

ಹಾಲಿ ಚಾಂಪಿಯನ್ ಬಜರಂಗ್ ಸತತ 3ನೇ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಜಯಿಸಿದರು. ಸಾಕ್ಷಿ ಮಲಿಕ್ ಕೂಡ 'ಹ್ಯಾಟ್ರಿಕ್' ಪದಕ ಗಳಿಸಿದರು. 2014 ಗ್ಲಾಸ್ಗೊ ಗೇಮ್ಸ್ ನಲ್ಲಿ ಬೆಳ್ಳಿ ಹಾಗೂ 2018ರ ಗೋಲ್ಡ್  ಕೋಸ್ಟ್ ಗೇಮ್ಸ್ ನಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಇದೀಗ ಚಿನ್ನವನ್ನು ಗೆದ್ದು ಮೂರೂ ಬಣ್ಣದ ಪದಕ ಗೆದ್ದ ಸಾಧನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News