ಸಂತ್ರಸ್ತೆ ಸುಪ್ರೀಂಕೋರ್ಟ್ ಮುಂದೆ ಆತ್ಮಹತ್ಯೆಗೈದ 1 ವರ್ಷದ ನಂತರ ಅತ್ಯಾಚಾರ ಪ್ರಕರಣದಲ್ಲಿ ದೋಷಮುಕ್ತಗೊಂಡ ಸಂಸದ

Update: 2022-08-06 13:05 GMT
Atul Rai/Facebook

ಕಾನ್ಪುರ್: ಅತ್ಯಾಚಾರ ಪ್ರಕರಣವೊಂದರಲ್ಲಿ ಬಹುಜನ್ ಸಮಾಜ ಪಕ್ಷದ ಸಂಸದ ಅತುಲ್ ರಾಯ್ (Atul Rai) ಅವರನ್ನು ವಾರಣಾಸಿಯ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಆದರೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವೂ ಅವರ ಮೇಲಿರುವುದರಿಂದ ಹಾಗೂ ಇದರ ಕುರಿತಂತೆ ತೀರ್ಪು ಹೊರಬೀಳದೇ ಇರುವುದರಿಂದ ಸಂಸದ ಜೈಲಿನಲ್ಲಿಯೇ ಉಳಿಯಲಿದ್ದಾರೆ.

ಘಟನೆ 2018ರಲ್ಲಿ ನಡೆದಿತ್ತೆನ್ನಲಾಗಿದ್ದು ಸಂತ್ರಸ್ತೆ ಕಳೆದ ವರ್ಷ ನ್ಯಾಯದಾನ ವಿಳಂಬವಾಗಿದೆ ಎಂಬ ಬೇಸರದಲ್ಲಿ  ಸುಪ್ರೀಂ ಕೋರ್ಟ್(supreme court) ಹೊರಗಡೆ ಬೆಂಕಿ ಹಚ್ಚಿ ಆತ್ಮಹತ್ಯೆಗೈದಿದ್ದಳು.

 ಪ್ರಕರಣದ ಒಂಬತ್ತು ಮಂದಿ ಸಾಕ್ಷಿಗಳು ನೀಡಿದ ಹೇಳಿಕೆಗಳು ರಾಯ್ ವಿರುದ್ಧದ ಆರೋಪಕ್ಕೆ ಸಾಕಷ್ಟು ಪುರಾವೆ ಒದಗಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಖುಲಾಸೆಗೊಳಿಸಲಾಗಿದೆ.

ಈ ಆದೇಶದ ವಿರುದ್ಧ ಹೈಕೋರ್ಟ್ ಕದ ತಟ್ಟಲಾಗುವುದು ಎಂದು ದೂರುದಾರರ ಪರ ವಕೀಲ ರಾಜೇಶ್ ಯಾದವ್ ಹೇಳಿದ್ದಾರೆ.

ಸಂಸದ 2018ರಲ್ಲಿ ವಾರಣಾಸಿಯ(varanasi) ಅವರ ಮನೆಯಲ್ಲಿ ತನ್ನ ಮೇಲೆ ಅತ್ಯಾಚಾರಗೈದಿದ್ದರು ಎಂದು ಸಂತ್ರಸ್ತೆ ಮೇ 2019ರಲ್ಲಿ ದಾಖಲಿಸಿದ್ದ ದೂರಿನಲ್ಲಿ ಆರೋಪಿಸಿದ್ದಳು. ರಾಯ್ ಈ ಪ್ರಕರಣದಲ್ಲಿ ಅದೇ ವರ್ಷದ ಜೂನ್‍ನಲ್ಲಿ ಜೈಲುಪಾಲಾಗಿದ್ದರೂ ಘೋಸಿ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು.

ಉತ್ತರ ಪ್ರದೇಶ ಪೊಲೀಸರು ಆರೋಪಿಗೆ ಸಹಾಯ ಮಾಡುತ್ತಿದ್ದಾರೆ, ಆತನ ಸಹವರ್ತಿಗಳು ತನಗೆ ಹಾಗೂ ತನ್ನ ಕುಟುಂಬಕ್ಕೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆತ್ಮಹತ್ಯೆಗೈಯ್ಯುವ ಮುನ್ನ ಫೇಸ್ಬುಕ್ ಲೈವ್‍ನಲ್ಲಿ ಸಂತ್ರಸ್ತೆ ಹೇಳಿಕೊಂಡಿದ್ದಳು.

ಸಂತ್ರಸ್ತೆ ತನ್ನ ಜನ್ಮದಿನಾಂಕವನ್ನು ಮರೆಮಾಚಲು ದಾಖಲೆಗಳನ್ನು ಫೋರ್ಜರಿ ಮಾಡಿದ್ದಾಳೆ ಎಂದು ರಾಯ್ ಸಹೋದರ ಪವನ್ ಕುಮಾರ್ 2020ರಲ್ಲಿ ನಿಡಿದ ದೂರಿನ ಆಧಾರದಲ್ಲಿ ಪೊಲೀಸರು ಸಂತ್ರಸ್ತೆಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ್ದರು.

ಇದನ್ನೂ ಓದಿ: ಕಾಣೆಯಾಗಿ ಒಂಬತ್ತು ವರ್ಷ, ಏಳು ತಿಂಗಳುಗಳ ಬಳಿಕ ಮರಳಿ ಕುಟುಂಬದ ಮಡಿಲು ಸೇರಿದ ಬಾಲಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News