ಇಸ್ರೇಲ್‌ ನಿಂದ ವಾಯುದಾಳಿ: ಗಾಝಾ ಪ್ರದೇಶದಲ್ಲಿ ಮುಂದುವರಿದ ಘರ್ಷಣೆ

Update: 2022-08-06 15:31 GMT
Image: Pexel

ಜೆರುಸಲೇಂ, ಆ.6: ಗಾಝಾ ನಗರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಪೆಲೆಸ್ತೀನ್ ಉಗ್ರರ ಸಂಘಟನೆ ಇಸ್ರೇಲ್ ನಗರದ ಮೇಲೆ ರಾಕೆಟ್ ದಾಳಿ ನಡೆಸುವುದರೊಂದಿಗೆ ಈ ಪ್ರದೇಶದಲ್ಲಿ ಗಡಿಯುದ್ಧಕ್ಕೂ ಸುಮಾರು 1 ವರ್ಷದಿಂದ ಶಾಂತ ಪರಿಸ್ಥಿತಿ ಕದಡಿದ್ದು ಉದ್ವಿಗ್ನತೆ ಮುಂದುವರಿದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಝಾ ಸಿಟಿಯ ಬಹುಮಹಡಿ ಕಟ್ಟಡವೊಂದರ ಮೇಲೆ ಹಗಲಿನಲ್ಲಿ ನಡೆಸಿದ ವಿಶೇಷ ವೈಮಾನಿಕ ಕಾರ್ಯಾಚರಣೆಯಲ್ಲಿ ಪೆಲೆಸ್ತೀನ್ ಉಗ್ರರ ತಂಡದ ಸೀನಿಯರ್ ಕಮಾಂಡರ್ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ.

ಬಳಿಕ ಪಶ್ಚಿಮ ದಂಡೆಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 19 ಉಗ್ರರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಶುಕ್ರವಾರ ಘೋಷಿಸಿತ್ತು. ಇದೇ ವೇಳೆ, ಪೆಲೆಸ್ತೀನ್ ಗಡಿಯಿಂದಾಚೆ ಕನಿಷ್ಟ 160 ರಾಕೆಟ್ ಪ್ರಯೋಗಿಸಿದ್ದು ಕೆಲವು ಇಸ್ರೇಲ್ನ ವಾಣಿಜ್ಯ ಕೇಂದ್ರ ಟೆಲ್ಅವೀವ್ಗೆ ಅಪ್ಪಳಿಸಿದೆ. ಬಹುತೇಕ ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ. ಕೆಲವು ನಾಗರಿಕರು ಅಲ್ಪಪ್ರಮಾಣದಲ್ಲಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮಗುವಿನ ಸಹಿತ ಇತರ ಕನಿಷ್ಟ 9 ಪೆಲೆಸ್ತೀನೀಯರು ಮೃತಪಟ್ಟಿದ್ದು 79 ಮಂದಿ ಗಾಯಗೊಂಡಿದ್ದಾರೆ ಎಂದು ಪೆಲೆಸ್ತೀನ್ ನ ಆರೋಗ್ಯ ಇಲಾಖೆ ಶನಿವಾರ ಹೇಳಿದೆ.

ಇಸ್ರೇಲ್ ದಾಳಿಯನ್ನು ಖಂಡಿಸಿರುವ ಪೆಲೆಸ್ತೀನ್ ಅಥಾರಿಟಿ(ಪಿಎ), ಅಂತರಾಷ್ಟ್ರೀಯ ಸಮುದಾಯ ತಕ್ಷಣ ಮಧ್ಯಪ್ರವೇಶಿಸಿ ತನ್ನ ನಾಗರಿಕರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದೆ. ಹಿಂಸಾಚಾರ ಅಂತ್ಯಗೊಳಿಸಲು ಈಜಿಪ್ಟ್, ವಿಶ್ವಸಂಸ್ಥೆ ಮತ್ತು ಕತರ್ ಮಧ್ಯಸ್ಥಿಕೆಯಲ್ಲಿ ನಡೆದಿರುವ ಸಂಧಾನ ಮಾತುಕತೆಯಲ್ಲಿ ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಪಿಎ ಮೂಲಗಳು ಹೇಳಿವೆ. ಗಾಝಾದ ಮೇಲೆ ನಿಯಂತ್ರಣ ಹೊಂದಿರುವ ಹಮಾಸ್ ಸಂಘಟನೆ ಈ ಸಂಘರ್ಷಕ್ಕೆ ಪ್ರವೇಶ ಮಾಡಿದರೆ ಹಿಂಸಾಚಾರ ಇನ್ನಷ್ಟು ಉಲ್ಬಣಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News