ಜಮ್ಮು-ಕಾಶ್ಮೀರ: ಬೆಟ್ಟದ ತುದಿಯ ಮಂದಿರಕ್ಕೆ ವಿಗ್ರಹಗಳನ್ನು ಸಾಗಿಸಲು ಮುಸ್ಲಿಮರ ನೆರವು

Update: 2022-08-06 16:46 GMT
ಸಾಂದರ್ಭಿಕ ಚಿತ್ರ: Thenewsnow 

ಭದೇರವಾಹ್,ಆ.6: ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ ಕುರ್ಸರಿ ಪಂಚಾಯತ್ನ ಮುಸ್ಲಿಮ್ ನಿವಾಸಿಗಳು ಅಲ್ಲಿಯ ಪುರಾತನ ಮಂದಿರವೊಂದಕ್ಕೆ ಬೃಹತ್ ವಿಗ್ರಹಗಳನ್ನು ಸಾಗಿಸುವುದರಲ್ಲಿ ಹಿಂದುಗಳೊಂದಿಗೆ ಕೈ ಜೋಡಿಸುವ ಮೂಲಕ ಕೋಮು ಸೌಹಾರ್ದಕ್ಕೆ ಉದಾಹರಣೆಯಾಗಿದ್ದಾರೆ.

ಭದೇರವಾಹ್-ದೋಡಾ ಹೆದ್ದಾರಿಯಿಂದ ಮೂರು ಕಿ.ಮೀ. ಅಂತರದಲ್ಲಿರುವ ಕುರ್ಸರಿಯ ಬೆಟ್ಟವೊಂದರ ತುದಿಯಲ್ಲಿರುವ ಪುರಾತನ ಶಿವ ಮಂದಿರವನ್ನು ಇತ್ತೀಚಿಗೆ ನವೀಕರಿಸಲಾಗಿದ್ದು,ಅಲ್ಲಿ ಪ್ರತಿಷ್ಠಾಪನೆಗಾಗಿ ರಾಜಸ್ಥಾನದಿಂದ ಮಾರ್ಬಲ್ನಿಂದ ನಿರ್ಮಿತ,ತಲಾ 500 ಕೆ.ಜಿ.ಯಿಂದ 700 ಕೆ.ಜಿ.ಗಳಷ್ಟು ತೂಗುವ ಆರು ವಿಗ್ರಹಗಳನ್ನು ತರಿಸಲಾಗಿತ್ತು.

ಮಂದಿರಕ್ಕೆ ಸಾಗಲು ರಸ್ತೆಯಿಲ್ಲದ್ದರಿಂದ ಅಲ್ಲಿಗೆ ಈ ವಿಗ್ರಹಗಳನ್ನು ಸಾಗಿಸುವುದು ಶಿವ ಮಂದಿರ ಸಮಿತಿಯನ್ನು ಪೇಚಿನಲ್ಲಿ ಸಿಲುಕಿಸಿತ್ತು. ಸಮಿತಿಯ ಕಷ್ಟವನ್ನು ಗ್ರಹಿಸಿದ ಕುರ್ಸರಿ ಪಂಚಾಯತ್ ಅಧ್ಯಕ್ಷ ಸಾಜಿದ್ ಮೀರ್ ಅವರು ರಸ್ತೆಯ ತುರ್ತು ನಿರ್ಮಾಣಕ್ಕಾಗಿ 4.6 ಲ.ರೂ.ಗಳನ್ನು ಮಂಜೂರು ಮಾಡಿದ್ದು ಮಾತ್ರವಲ್ಲ,ವಿಗ್ರಹ ಸಾಗಣೆಗೆ ನೆರವಾಗುವಂತೆ ತನ್ನ ಸಮುದಾಯಕ್ಕೆ ಸೇರಿದ 150 ಗ್ರಾಮಸ್ಥರಿಗೆ ಸೂಚನೆಯನ್ನೂ ನೀಡಿದ್ದರು.

‘ಇದು ನಮ್ಮ ಸಂಸ್ಕೃತಿಯಾಗಿದೆ ಮತ್ತು ಇವು ನಾವು ಪರಾಂಪರಾಗತವಾಗಿ ಪಡೆದುಕೊಂಡಿರುವ ಮೌಲ್ಯಗಳಾಗಿವೆ. ಇದೇ ಕಾರಣದಿಂದ ನಾವು ಧರ್ಮದ ಆಧಾರದಲ್ಲಿ ನಮ್ಮನ್ನು ವಿಭಜಿಸಲು ಪ್ರಯತ್ನಿಸುವವರ ನೀಚ ತಂತ್ರಗಳಿಗೆ ಎಂದೂ ಬಲಿಯಾಗಲಿಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ ಎನ್ನುವುದನ್ನು ನಾವು ಇಂದು ಮತ್ತೊಮ್ಮೆ ತೋರಿಸಿದ್ದೇವೆ ’ ಎಂದು ಮೀರ್ ಸುದ್ದಿಸಂಸ್ಥೆಗೆ ತಿಳಿಸಿದರು.

ನಾಲ್ಕು ದಿನಗಳ ಕಾಲ ಶ್ರಮದಾನ ಮಾಡಿದ ಉಭಯ ಸಮುದಾಯಗಳ ಸ್ವಯಂಸೇವಕರು ಯಂತ್ರಗಳು ಮತ್ತು ಹಗ್ಗಗಳನ್ನು ಬಳಸಿ ದೈತ್ಯ ವಿಗ್ರಹಗಳನ್ನು ಬೆಟ್ಟದ ತುದಿಯಲ್ಲಿರುವ ಮಂದಿರಕ್ಕೆ ಸಾಗಿಸಿದ್ದಾರೆ. ಆ.9ರಂದು ನಡೆಯಲಿರುವ ಧಾರ್ಮಿಕ ಸಮಾರಂಭದಲ್ಲಿ ಈ ವಿಗ್ರಹಗಳು ಪ್ರತಿಷ್ಠಾಪನೆಗೊಳ್ಳಲಿವೆ.

‘ನಾವು ಗಮನದ ಕೇಂದ್ರಬಿಂದುವಾಗಿರುವುದು ನಿಜಕ್ಕೂ ಉತ್ತೇಜಕವಾಗಿದೆ. ಸೇನೆಯ ಸ್ಥಳೀಯ ಘಟಕ,ರಸ್ತೆ ನಿರ್ಮಾಣ ಕಂಪನಿಗಳು ಮತ್ತು ಆಡಳಿತ ನಮಗೆ ಸಂಪೂರ್ಣ ಸಹಕಾರವನ್ನು ನೀಡಿವೆ ’ ಎಂದು ಮೀರ್ ತಿಳಿಸಿದರು.

ತಮ್ಮ ಮುಸ್ಲಿಮ್ ನೆರೆಕರೆಯವರ ಸೌಹಾರ್ದತೆ ಮತ್ತು ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಅವರ ಉತ್ಸಾಹವನ್ನು ಶಿವ ಮಂದಿರ ಸಮಿತಿಯು ಮುಕ್ತವಾಗಿ ಪ್ರಶಂಸಿಸಿದೆ. ‘ನಮಗೆ ಶಕ್ತಿಯನ್ನು ನೀಡಿದ ನಮ್ಮ ನೆರೆಕರೆಯವರು ತೋರಿಸಿದ ಪ್ರೀತಿ, ವಿಶ್ವಾಸ ಹೃದಯಸ್ಪರ್ಶಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ವಿಗ್ರಹಗಳನ್ನು ಬೆಟ್ಟದ ತುದಿಗೆ ಸಾಗಿಸಲು ಶ್ರಮಿಸಿದ್ದೇವೆ. ಒಂದು ಹಂತದಲ್ಲಿ ಅದು ಅಸಾಧ್ಯವೆಂಬಂತೆ ಕಂಡುಬಂದಿತ್ತು ’ಎಂದು ಸಮಿತಿಯ ಅಧ್ಯಕ್ಷ ರವೀಂದ್ರ ಪ್ರದೀಪ್ ಅವರು ಹೇಳಿದರು.

‘ನಮ್ಮ ಯುವಜನರು ಕೋಮು ಸೌಹಾರ್ದ ಮತ್ತು ಪರಸ್ಪರ ಭ್ರಾತೃತ್ವದ ತತ್ತ್ವಗಳನ್ನು ಉತ್ತಮವಾಗಿ ಮುನ್ನಡೆಸುತ್ತಿರುವುದು ನಿಜಕ್ಕೂ ಸಂತೋಷವನ್ನುಂಟು ಮಾಡಿದೆ ಮತ್ತು ಇದು ನಾವು ವೌಲ್ಯಗಳನ್ನು ಅವರಿಗೆ ಯಶಸ್ವಿಯಾಗಿ ವರ್ಗಾಯಿಸಿದ್ದೇವೆ ಎನ್ನುವುದನ್ನು ತೋರಿಸುತ್ತಿದೆ’ ಎಂದು ಸ್ಥಳೀಯ ನಿವಾಸಿ ಹಾಜಿ ಅಬ್ದುಲ್ ಗನಿ ಮಸ್ತಾನಾ (75) ಹೇಳಿದರು. ಭದೇರವಾಹ್ನಲ್ಲಿರುವ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕವು ಸದ್ಭಾವನಾ ಸಂಕೇತವಾಗಿ ಗ್ರಾಮಸ್ಥರಿಗೆ ನೆರವಾಗಲು ತನ್ನ ಸಿಬ್ಬಂದಿಗಳು ಮತ್ತು ಯಂತ್ರಗಳನ್ನು ಒದಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News