ದೇಶ ವಿಭಜನೆ ಸಂದರ್ಭ ಬೇರ್ಪಟ್ಟಿದ್ದ ಅಕ್ಕ-ತಮ್ಮ ಪುನರ್ಮಿಲನ

Update: 2022-08-07 03:21 GMT
 (Photo sourced from Punjabi Lehar)

ಹೊಸದಿಲ್ಲಿ: ಪಾಕಿಸ್ತಾನದ ಶೇಖುಪುರದ ಮುಮ್ತಾಝ್ ಬೀಬಿಯವರ ತಮ್ಮ 73 ವರ್ಷದ ಗುರ್ಮುಖ್ ಸಿಂಗ್, ಕರ್ತಾರ್‍ಪುರ ಕಾರಿಡಾ‌ರ್ ನಲ್ಲಿ ಮತ್ತೆ ಅಕ್ಕನನ್ನು ಭೇಟಿ ಮಾಡಿದ ಅಪೂರ್ವ ಕ್ಷಣ, ಮೌನ ಮತ್ತು ಕಣ್ಣೀರಿಗೆ ಸಾಕ್ಷಿಯಾಯಿತು. ಕಾರಣ ಇಷ್ಟೇ; ದೇಶ ವಿಭಜನೆ ಸಂದರ್ಭದಲ್ಲಿ ಪಲಾಯನ ಮಾಡಿದ ಸಿಕ್ಖ್ ಕುಟುಂಬದ ಕುಡಿಗಳ ಪುನರ್ ಮಿಲನದ ಸಂದರ್ಭ ಅದು ಎಂದು hindustantimes.com ವರದಿ ಮಾಡಿದೆ.

"ಮನಸಾರೆ ನಮ್ಮ ಹೃದಯಗಳು ಅತ್ತ ಬಳಿಕವಷ್ಟೇ ಪರಸ್ಪರ ಬೇರ್ಪಡೆ, ಯಾವುದೇ ಬಗೆಯ ಸಂಪರ್ಕವಿಲ್ಲದೆ ಕಳೆದ ಏಳು ದಶಕಗಳಲ್ಲಿ ನಮ್ಮ ಕುಟುಂಬಗಳಿಗೆ ಏನಾಯಿತು ಎಂದು ಮಾತನಾಡಲು ಆರಭಿಸಿದೆವು" ಎಂದು ಅಕ್ಕ-ತಮ್ಮ ಗದ್ಗದಿತರಾದರು.

"ನಾವೆಲ್ಲ ಹುಟ್ಟಿದ್ದು 1947ರ ಬಳಿಕ ಮತ್ತು ನಮ್ಮ ಅಕ್ಕ ಗುಮೈಲ್ (ಗೆಜೊ) ಮತ್ತು ಆಕೆಯ ತಾಯಿ ಪ್ಯಾರ್ ಕೌರ್ ನಮ್ಮ ಹುಟ್ಟೂರಿನ ಬಳಿ ನಡೆದ ಗುಂಪು ದಾಳಿಯಲ್ಲಿ ಮೃತಪಟ್ಟಿರಬೇಕು ಎಂದೇ ನಮ್ಮ ಕುಟುಂಬದವರು ನಂಬಿದ್ದೆವು. ಆ ಬಳಿಕ ತಂದೆ ಸರ್ದಾರ್ ಪಾಲಾ ಸಿಂಗ್ ತಮ್ಮ ಪತ್ನಿಯ ತಂಗಿ ಪ್ರಸೀನ್ ಕೌರ್ ಅವರನ್ನು ವಿವಾಹವಾಗಿ ಕುಟುಂಬ ಬೆಳೆಸಿದರು ಎಂದು ಗುರ್ಮುಖ್ ಸಿಂಗ್ ಮೆಲುಕು ಹಾಕಿದರು.

ನಾವು ಕಳೆದುಕೊಂಡ ಪಾಕಿಸ್ತಾನದ ಸೆಖ್ಮಾ ಗ್ರಾಮದ ಚಿತ್ರವನ್ನು ಅಳಿಯ ಆ್ಯಂಡ್ರಾಯ್ಡ್ ಫೋನ್‍ನಲ್ಲಿ ತೋರಿಸದಿದ್ದರೆ ನಮ್ಮ ಕಳೆದುಹೋದ ಅಕ್ಕನ ಜತೆಗೆ ಈ ಪುನರ್ ಮಿಲನ ಸಾಧ್ಯವಾಗುತ್ತಿರಲಿಲ್ಲ. ಸೆಖ್ಮಾ ಗ್ರಾಮದ ಅಂಗಡಿಯೊಂದರ ಫೋನ್ ನಂಬರ್ ಕೂಡಾ ಆತ ಕಳುಹಿಸಿಕೊಟ್ಟಿದ್ದ. ಈ ಮೂಲಕ ಅಂಗಡಿಯವರನ್ನು ಸಂಪರ್ಕಿಸಿ, ಗ್ರಾಮದ ಹಿರಿಯ ಜತೆ ಸಂಪರ್ಕ ಸಾಧಿಸಿದೆವು. ನನ್ನ ಅಕ್ಕನಿಗೆ 1947ರಲ್ಲಿ ಕೇವಲ 18 ತಿಂಗಳು ಆಗಿತ್ತು ಎಂದು ವೃದ್ಧರೊಬ್ಬರು ಹೇಳಿದರು.

ರಂಜೀತ್‍ ಕೋಟ್ ಗ್ರಾಮದಲ್ಲಿ ತಾಯಿಯ ಶವದ ಮುಂದೆ ಈ ಮಗು ಅಳುತ್ತಿತ್ತು. ಗ್ರಾಮದ ಮುಖ್ಯಸ್ಥ, ಚೌಧರಿ ಮುಬಾರಕ್ ಅಲಿ ಶ್ರೀಮಂತ ಹಾಗೂ ದಯಾಳುವಾಗಿದ್ದರು. ಅವರು ಆಕೆಯನ್ನು ದತ್ತುಪುತ್ರಿಯಾಗಿ ಸ್ವೀಕರಿಸಿದರು. ಆಕೆಯನ್ನು ಬೆಳೆಸಿ ಗಲೋಧಿನ್ ಗ್ರಾಮದ ಯುವಕನಿಗೆ ವಿವಾಹ ಮಾಡಿಕೊಟ್ಟರು" ಎಂದು ವಿವರ ನೀಡಿದರು.

ಎರಡು ವರ್ಷ ಮುನ್ನ ಅಕ್ಕನ ಸಂಪರ್ಕ ಸಾಧಿಸಿದರೂ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಈ ವರ್ಷದ ಜನವರಿಯಲ್ಲಿ ಕರ್ತಾರ್‍ಪುರ ಕಾರಿಡಾರ್‌ ನಲ್ಲಿ ಭೇಟಿ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದರು.

"ನಮ್ಮ ಕುಟುಂಬದಿಂದ 25 ಮಂದಿ ಹಾಗೂ ಅವರ ಕಡೆಯಿಂದ 15 ಮಂದಿ ಪ್ರತಿಯೊಬ್ಬರಿಗೂ ಉಡುಗೊರೆಗಳೊಂದಿಗೆ ಬಂದಿದ್ದರು. ಗೆಜೊ (ಈಗ ಮುಮ್ತಾಝ್ ಬೀಬಿ) "ಚೌಧರಿ ಮುಬಾರಕ್ ಅಲಿ ನನ್ನ ಸಾಕು ತಂದೆ. ನನ್ನ ಪೋಷಕರು ಈಗ ಇಲ್ಲ. ನಾನು ಸಿಕ್ಖ್ ಕುಟುಂಬಕ್ಕೆ ಸೇರಿದವಳು ಎಂದು ಹೊರಗಿನವರು ಹೇಳಿದ ಬಳಿಕ ಗೊತ್ತಾಯಿತು" ಎಂದು ತಿಳಿಸಿದರು.‌

ಗುರ್ಮುಖ್ ಸಿಂಗ್ ಹಾಗೂ ಅವರ ತಮ್ಮ ಬಲದೇವ್ ಸಿಂಗ್, ಈ ಚಳಿಗಾಲದಲ್ಲಿ ಶೇಖುಪುರಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದಾರೆ. ಬಳಿಕ ಮುಮ್ತಾಝ್ ಬೀಬಿ ಹಾಗೂ ಆಕೆಯ ಕುಟುಂಬದವರು ಪಟಿಯಾಲಾ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News