ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್‌ ಟೀಕೆಗೆ ಬಳಕೆ: ಸಚಿವ ಸುನೀಲ್‌ ಕುಮಾರ್

Update: 2022-08-07 17:20 GMT

ಕಾರ್ಕಳ : ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವೀರಪ್ಪ ಮೊಯ್ಲಿಯಾದಿಯಾಗಿ ಕಾಂಗ್ರೆಸ್‌ ಮುಖಂಡರು ಬಿಜೆಪಿ ವಿರುದ್ಧ ಟೀಕೆಗೆ ಬಳಸುತ್ತಿದ್ದಾರೆ. ದೇಶ, ರಾಷ್ಟ್ರಧ್ವಜದ ಕುರಿತು ಗೌರವ ಇಲ್ಲದ ಕಾಂಗ್ರೆಸ್‌ಗೆ ಬಿಜೆಪಿ ಸರಕಾರವನ್ನು ಟೀಕೆ ಮಾಡಲು ಯಾವ ನೈತಿಕತೆ ಇದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಕಿಡಿಕಾರಿದರು. 

ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಅಮೃತ ಮಹೋತ್ಸವ ಆಚರಣೆ ಕುರಿತು ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಅವರಿಂದ ಸಾಧ್ಯವಾಗಿಲ್ಲ. ಅವತ್ತು ರಾಷ್ಟ್ರ‍ಧ್ವಜದ ಬಗ್ಗೆ ಗೌರವ ಇಟ್ಟುಕೊಳ್ಳದ ವೀರಪ್ಪ ಮೊಯ್ಲಿ ಇಂದು ಕಾಲ್ನಡಿಗೆ ಜಾಥಾ ಮಾಡುವ ಮೂಲಕ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಸರ್ವಾಧಿಕಾರದ ಬಗ್ಗೆ ಮಾತನಾಡುತ್ತೆ, ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಬಗ್ಗೆ ಸಾಕ್ಷಿ ಕೇಳಿದ ಕಾಂಗ್ರೆಸ್‌ ತನ್ನ ಅಧಿಕಾರವಧಿಯಲ್ಲಿ ಸಂವಿಧಾನವನ್ನು ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿ ಅಗೌರವ ತೋರಿದೆ ಎಂದು ಸುನೀಲ್‌ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. 

ಕಾರ್ಕಳದಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ವೀರಪ್ಪ ಮೊಯ್ಲಿ ಶಪಥ ಮಾಡಿದ್ದಾರೆ ಎಂಬುವುದನ್ನು ಮಾಧ್ಯಮದಲ್ಲಿ ನೋಡಿದ್ದೆ. 6 ಬಾರಿ ಕಾರ್ಕಳದಿಂದ ಗೆದ್ದು, ಶಾಸಕ ಮುಖ್ಯಮಂತ್ರಿಯಾದ ಮೊಯ್ಲಿ ಅವರು ಕಾರ್ಕಳದ ಅಭಿವೃದ್ಧಿ ಬಗ್ಗೆ ಅಂದು ಶಪಥ ಮಾಡಬೇಕಿತ್ತು ಎಂದು ಸುನೀಲ್‌ ತೀಕ್ಷ್ಮವಾಗಿ ಚುಚ್ಚಿದರು.

ಕಾರ್ಕಳದ ಅಭಿವೃದ್ದಿ ಓಟ ನೋಡಲಾರದೇ, ಕಾರ್ಕಳ ಉತ್ಸವಕ್ಕೆ, ಎಣ್ಣೆಹೊಳೆ ಯೋಜನೆಗೆ ಹೀಗೆ ಪ್ರತಿಯೊಂದು ಕಾರ್ಯಕ್ಕೂ ಕಾಂಗ್ರೆಸ್‌ನಿಂದ ವಿರೋಧ, ಟೀಕೆ ವ್ಯಕ್ತವಾಗುತ್ತಿದೆ. ಕಾರ್ಕಳ ಅಭಿವೃದ್ಧಿಯಾಗಬೇಕು ಎಂಬ ಕಲ್ಪನೆ ಇಟ್ಟುಕೊಂಡು ಕಳೆದೊಂದು ವರ್ಷದಿಂದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಯಾವ ವೇದಿಕೆಯನ್ನೂ ರಾಜಕಾರಣಕ್ಕಾಗಿ ಅಥವಾ ಟೀಕೆಗಾಗಿ ಬಳಸಿಕೊಂಡಿಲ್ಲ. ಆದರೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನೂ ಕಾಂಗ್ರೆಸ್‌ ಟೀಕೆಗೆ ಬಳಸುತ್ತಿರುವುದು ನೋಡಿ ಸುಮ್ಮನಿರೋಕೆ ಸಾಧ್ಯವಾಗಿಲ್ಲ. 100 ಸುಳ್ಳು ಹೇಳಿ ಸತ್ಯ ಮಾಡುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. 40 ವರ್ಷ ಕಾರ್ಕಳದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಕಾರ್ಕಳದ ಬಗ್ಗೆ ಯೋಚನೆಯೇ ಮಾಡಿಲ್ಲ ಎಂದು ಸುನೀಲ್‌ ಕುಮಾರ್‌ ಹೇಳಿದರು.

1947, 1969, 1973ರ ಯುದ್ಧದಲ್ಲಿ ನಮ್ಮ ದೇಶ ಸೊಲೊಪ್ಪುವಂತೆ ಆಗಿತ್ತು. ಆಗ ದೇಶದಲ್ಲಿ ಕಾಂಗ್ರೆಸ್‌ ಸರಕಾರ ಆಡಳಿತದಲ್ಲಿತ್ತು. ಅಂದು ಸಾಕಷ್ಟು ಭೂ ಭಾಗವನ್ನು ಶತ್ರು ರಾಷ್ಟ್ರಗಳಿಗೆ ಬಿಟ್ಟುಕೊಡಲಾಯಿತು. ದೇಶಕ್ಕೆ, ರಾಷ್ಟ್ರ ಧ್ವಜವನ್ನು ಗೌರವದಿಂದ ನೋಡಲು ಅರಿಯದ ಕಾಂಗ್ರೆಸ್‌  . ಕಾರ್ಗಿಲ್‌ ಯುದ್ಧದಲ್ಲಿ ಒಂದಿಂಚು ಜಾಗವನ್ನೂ ನಾವು ಬಿಟ್ಟುಕೊಟ್ಟಿಲ್ಲ. ಆಗ ಬಿಜೆಪಿ ಅಧಿಕಾರದಲ್ಲಿತ್ತು ಎನ್ನುವುದು ಮರೆಯಬಾರದು ಎಂದಾಗ ಇಡೀ ಸಭೆಯಲ್ಲಿ ಕರತಾಡನ ಮೊಳಗಿತು. ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್, ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯರಾಂ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ್ಯೋತಿ ರಮೇಶ್ ವಂದೇ ಮಾತರಂ ಹಾಡಿದರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ ನಾಯಕ್ ಸ್ವಾಗತಿಸಿದರು. ಬಿಜೆಪಿ ಯುವಮೋರ್ಚಾ ತಾಲೂಕು ಅ‍ಧ್ಯಕ್ಷ ಸುಹಾಸ್‌ ಶೆಟ್ಟಿ ನಿರೂಪಿಸಿ, ವಂದಿಸಿದರು. 

46 ಸಾವಿರ ಕುಟುಂಬ 5 ಸಾವಿರ ಅಂಗಡಿಗಳಲ್ಲೂ ರಾಷ್ಟ್ರಧ್ವಜ ಹಾರಾಟ 
ಕಾರ್ಕಳ ಹೆಬ್ರಿ ಉಭಯ ತಾಲೂಕಿನ 46 ಸಾವಿರ ಮನೆ, 5 ಸಾವಿರ ಅಂಗಡಿಗಳಲ್ಲೂ ರಾಷ್ಟ್ರಧ್ವಜ ರಾರಾಜಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಕಳಕ್ಕೆ ಈಗಾಗಲೇ ಸರಕಾರದಿಂದ 40 ಸಾವಿರ ಧ್ವಜ ಬಂದಿದೆ ಎಂದು ಸುನೀಲ್‌ ಕುಮಾರ್‌ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ ರಾಜ್ಯದ ಸ್ವಾತಂತ್ರ್ಯ ಹೋರಾಟ ನಡೆದ 75 ಸ್ಥಳಗಳನ್ನು ಗುರುತಿಸಲಾಗಿದ್ದು ಅಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದಲ್ಲಿ ನಡೆದ ಪ್ರತಿಯೊಂದು ಸ್ವಾತಂತ್ರ್ಯ ಹೋರಾಟಗಳು ಕೂಡ ರೋಮಾಂಚನ. ಕಾರ್ಕಳ ಅನಂತಶಯನ, ಕುಂದಾಪುರದ ಬಸ್ರೂರು, ಮಂಗಳೂರು ಬಾವುಟಗುಡ್ಡೆಯಲ್ಲಿ ಸುಳ್ಯದ ರಾಮೆ ಗೌಡ ನೇತೃತ್ವದಲ್ಲಿ ನಡೆದ ಸಂಗ್ರಾಮ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದವರು ನಡೆಸಿದ ಹೋರಾಟವನ್ನು ಸ್ಮರಿಸಲಾಗುತ್ತಿದೆ ಎಂದು ಸುನೀಲ್‌ ಕುಮಾರ್‌ ಹೇಳಿದರು. 

ಆ. 9 ಮತ್ತು 10ರಂದು ಬಿಜೆಪಿ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಮನೆ ಮೇಲೆ ಧ್ವಜ ಹಾರಿಸಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ತಿಳಿಸಿದ ಸುನೀಲ್‌ ಕುಮಾರ್‌ ರಾಷ್ಟ್ರಧ್ವಜ ಖರೀದಿ ಮಾಡಿಯೇ ಹಾರಿಸಬೇಕೆಂದು ಕಿವಿಮಾತು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಅವಕಾಶ ನಮಗೆ ದೊರೆತಿಲ್ಲ. ಆದರೆ, ಇಂದು ಅಮೃತ ಮಹೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುವಂತಹ ಯೋಗ ದೊರೆತಿದೆ ಎಂದು ಹೇಳಿದ ಸುನೀಲ್‌ ಕುಮಾರ್‌ ಜಗತ್ತೆ ಇಂದು ಭಾರತದ ಕಡೆಗೆ ನೋಡುತ್ತಿದೆ. ಉಕ್ರೇನ್‌ ರಷ್ಯಾ ಯುದ್ದದ ಸಂದರ್ಭವೂ ಅವೆರಡು ದೇಶಗಳು ಭಾರತದ ಸಲಹೆ ಪಡೆಯಲು ಮುಂದಾಗಿದ್ದವು. ಈ ಹಿಂದೆ ಅಮೇರಿಕಾ ದೊಡ್ಡಣ್ಣನಂತಿದ್ದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತವೇ ವಿಶ್ವಕ್ಕೆ ದೊಡ್ಡಣ್ಣನಂತಿದೆ ಎಂದರು. 

ಇದಕ್ಕೂ ಮುನ್ನ ಆರೂರು ತಿಮ್ಮಪ್ಪ ಶೆಟ್ಟಿ ಅವರು ರಾಷ್ಟ್ರಧ್ವಜದ ನೀತಿ ಸಂಹಿತೆ, ಧ್ವಜಾರೋಹಣ, ಅವರೋಹಣ ಹಾಗೂ ರಾಷ್ಟ್ರ ಧ್ವಜದ ಇತಿಹಾಸ, ಆ. 13, 14, 15ರಂದು ನಡೆಸುವ ಹರ್ ಘರ್ ತಿರಂಗ ಆಚರಣೆ ಬಗ್ಗೆ ಮಾಹಿತಿ ನೀಡಿದರು.

ಭಾರತ ಸೇವಾದಳ ಉಡುಪಿ ಜಿಲ್ಲಾಧ್ಯಕ್ಷ ಅಂಡಾರ್ ದೇವಿ ಪ್ರಸಾದ್ ಶೆಟ್ಟಿ, ಕಾರ್ಕಳ ತಾಲೂಕು ಗೌರವಾಧ್ಯಕ್ಷ ನಿತ್ಯಾನಂದ ಪೈ,  ಜಿಲ್ಲಾ ಸಂಘಟಕರಾದ ಫಕೀರ್ ಗೌಡ ಹಳಮನಿ ಉಪಸ್ಥಿತರಿದ್ದರು.

24 ಗಂಟೆಗಳ ಕಾಲ ಸ್ಯಾಕ್ಸೋಫೋನ್‌ ನುಡಿಸಿ ಸಾಧನೆ ಮಾಡಿರುವ ಬಾಲಕ ಮುದ್ರಾಡಿಯ ಪ್ರೀತಂ ದೇವಾಡಿಗ ಅವನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News