ಮಹಿಳೆಯನ್ನು ನಿಂದಿಸಿ, ಹಲ್ಲೆಗೈದ ಬಿಜೆಪಿ ಸದಸ್ಯನೆನ್ನಲಾದ ವ್ಯಕ್ತಿಯ ವಿರುದ್ಧ ಬುಲ್ಡೋಝರ್ ಕಾರ್ಯಾಚರಣೆ

Update: 2022-08-08 11:15 GMT

ಹೊಸದಿಲ್ಲಿ: ನೊಯ್ಡಾ(Noida)ದ ಸೆಕ್ಟರ್-93 ಬಿ ಯಲ್ಲಿರುವ ವಸತಿ ಸಮುಚ್ಛಯದಲ್ಲಿ ಗಿಡ ನೆಡುವ ವಿಚಾರದ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ನಿಂದಿಸಿ ಹಲ್ಲೆಗೈದ ಆರೋಪ ಹೊತ್ತ ಬಿಜೆಪಿ(BJP) ಕಿಸಾನ್ ಮೋರ್ಚಾ ಸದಸ್ಯನೆಂದು ತನ್ನನ್ನು ಪರಿಚಯಿಸುವ ವ್ಯಕ್ತಿಯೊಬ್ಬನ ಅಕ್ರಮ ನಿರ್ಮಾಣಗಳನ್ನು ಇಂದು ಬುಲ್ಡೋಝರ್(Bulldozer)ಗಳ ಮೂಲಕ ನೆಲಸಮಗೊಳಿಸಲಾಗಿದೆ.

ಆರೋಪಿ ಶ್ರೀಕಾಂತ್ ತ್ಯಾಗಿಯ ಅಕ್ರಮ ನಿರ್ಮಾಣಗಳನ್ನು ಗ್ರ್ಯಾಂಡ್ ಒಮೇಕ್ಸ್ ಸೊಸೈಟಿಯಲ್ಲಿ ಇಂದು ನೆಲಸಮಗೊಳಿಸಲಾಗಿದೆ. ಈ ಸಂದರ್ಭ ಗದ್ದಲ ಸೃಷ್ಟಿಸಿದ ತ್ಯಾಗಿಯ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು ಆತನ ವಿರುದ್ಧ ಗೂಂಡಾ ಕಾಯಿದೆಯನ್ನೂ ಹೇರಲಾಗಿದೆ.

ಮಹಿಳೆ ಮತ್ತು ತ್ಯಾಗಿಯ ನಡುವೆ ನಡೆದ ಜಗಳದ ವೀಡಿಯೋ ವೈರಲ್ ಆಗಿತ್ತಲ್ಲದೆ ಅದರಲ್ಲಿ ಆರೋಪಿಯು ಮಹಿಳೆಗೆ ನಿಂದಿಸಿ ಹಲ್ಲೆಗೈಯ್ಯುತ್ತಿರುವುದು ಕಾಣಿಸುತ್ತದೆ.

ಇದರ ಬೆನ್ನಲ್ಲೇ ತ್ಯಾಗಿಯ ಬೆಂಬಲಿಗರು ವಸತಿ ಸಮುಚ್ಛಯಕ್ಕೆ ಆಗಮಿಸಿ ಘೋಷಣೆಗಳನ್ನು ಕೂಗಿ ಮಹಿಳೆಯ ವಿಳಾಸವನ್ನು ಕೇಳಿದ್ದರು.

ತ್ಯಾಗಿ ತನ್ನನ್ನು ಬಿಜೆಪಿ ಕಿಸಾನ್ ಮೋರ್ಚಾ ಸದಸ್ಯನೆಂದು ಪರಿಚಯಿಸುತ್ತಿದ್ದು ಹಿರಿಯ ಪಕ್ಷ ನಾಯಕರೊಂದಿಗೆ ತಾನಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾನೆ.

ಆದರೆ ಆತನಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಮಹಿಳೆಯನ್ನು ನಿಂದಿಸಿದ ಆರೋಪಿಯ ವಿರುದ್ಧ ಕಠಿಣ ಕ್ರಮಕೈಗೊಂಡಿದ್ದಕ್ಕಾಗಿ ದಿಲ್ಲಿ ಬಿಜೆಪಿ ವಕ್ತಾರ ಖೇಮ್‍ಚಂದ್ ಶರ್ಮ ಅವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಈ ಪ್ರಕರಣದ ನಂತರ ಕರ್ತವ್ಯ ನಿಭಾಯಿಸಲು ನಿರ್ಲಕ್ಷ್ಯ ತೋರಿದ ನೊಯ್ಡಾ ಫೇಸ್ 2 ಠಾಣೆಯ ಠಾಣಾಧಿಕಾರಿ ಸುಜಿತ್ ಉಪಾಧ್ಯಾಯ ಅವರನ್ನು ಅಮಾನತುಗೊಳಿಸಲಾಗಿದೆ.

ಆರೋಪಿಯನ್ನು ಬಂಧಿಸಬೇಕು ಮತ್ತು ಸಂತ್ರಸ್ತ ಮಹಿಳೆಗೆ ಪೊಲೀಸ್ ರಕ್ಷಣೆಯೊದಗಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.

ಇದನ್ನೂ ಓದಿ: ಕೇಂದ್ರ ಸೇವೆಗೆ ಹೋಗಲು ಬಯಸದ ಹಿರಿಯ ಐಪಿಎಸ್ ಅಧಿಕಾರಿಗಳು !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News