ರಾಮಮಂದಿರ ನಿರ್ಮಾಣದ ಭೂಮಿಯಲ್ಲಿ ಅವ್ಯವಹಾರ: ಸುಪ್ರೀಂ ಕೋರ್ಟ್‌ ತನಿಖೆಗೆ ಕಾಂಗ್ರೆಸ್‌ ಮನವಿ

Update: 2022-08-08 16:16 GMT

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಪಾದಿತ ಭೂ ಹಗರಣದ ಕುರಿತು ವಿಚಾರಣೆ ನಡೆಸುವಂತೆ ಕಾಂಗ್ರೆಸ್ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಬಿಜೆಪಿಯ ಮೇಯರ್ ರಿಷಿಕೇಶ್ ಉಪಾಧ್ಯಾಯ, ಬಿಜೆಪಿ ಶಾಸಕ ವೇದ್ ಪ್ರಕಾಶ್ ಗುಪ್ತಾ ಮತ್ತು ಇನ್ನೋರ್ವ ಬಿಜೆಪಿ ಮಾಜಿ ಶಾಸಕ ಗೋರಖನಾಥ್ ಬಾಬಾ ಸೇರಿದಂತೆ 40 ಮಂದಿಯನ್ನು ದೇಗುಲದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಭ್ರಷ್ಟಾಚಾರದ ಆರೋಪದ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.   

 ಅದೇ ವೇಳೆ, ಬಿಜೆಪಿ ಆರೋಪ ಪಟ್ಟಿಯ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಅಕ್ರಮ ನಿವೇಶನ ಮಾರಾಟ: ಬಿಜೆಪಿ ಶಾಸಕ ಸೇರಿದಂತೆ 40 ಮಂದಿ ವಿರುದ್ಧ ಆರೋಪ

ಬಿಜೆಪಿ ನಾಯಕ ದೀಪ್ ನಾರಾಯಣ್ ಅವರು ಫೆಬ್ರವರಿಯಲ್ಲಿ 20 ಲಕ್ಷ ರೂಪಾಯಿಗೆ ಅಯೋಧ್ಯೆಯಲ್ಲಿ 890 ಚದರ ಮೀಟರ್ ಭೂಮಿಯನ್ನು ಖರೀದಿಸಿದ್ದಾರೆ ಮತ್ತು ಅದನ್ನು ಮಂದಿರ ನಿರ್ಮಾಣವನ್ನು ನಿರ್ವಹಿಸುತ್ತಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 2.5 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಕಳೆದ ಜೂನ್‌ನಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಆರೋಪ ಮಾಡಿತ್ತು. ಕೇವಲ 79 ದಿನಗಳಲ್ಲಿ 1,250% ಲಾಭ ಗಳಿಸಿದ ವ್ಯವಹಾರದ ಮೇಲಿನ ಆರೋಪವು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು.

ನಾರಾಯಣ್ ಪ್ರತಿ ಚದರ ಮೀಟರ್‌ಗೆ 2,247 ರೂಪಾಯಿ ಬೆಲೆಗೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ, ಆದರೆ ಮಾರಾಟ ಪತ್ರದ ಪ್ರಕಾರ ಅದರ ಕಲೆಕ್ಟರ್ ದರವು ಪ್ರತಿ ಚದರ ಮೀಟರ್‌ಗೆ 4,000 ರೂ.ನಂತೆ ತೆತ್ತಿದ್ದಾರೆ.  ನಂತರ ನಾರಾಯಣ್ ಭೂಮಿಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪ್ರತಿ ಚದರ ಮೀಟರ್‌ಗೆ 28,090 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News