ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆ ಮೇಲೆ ತನಿಖಾ ಸಂಸ್ಥೆ ದಾಳಿ

Update: 2022-08-09 01:50 GMT
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ಮನೆ ಮೇಲೆ ಸೋಮವಾರ ಫೆಡರಲ್ ಬ್ಯೂರ್ ಆಫ್ ಇನ್‍ವೆಸ್ಟಿಗೇಶನ್ (ಎಫ್‍ಬಿಐ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆ ಟ್ರಂಪ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಬೆಂಬಲಿಗರೂ ಇದನ್ನು ಟೀಕಿಸಿದ್ದಾರೆ. ಆದರೆ ಟ್ರಂಪ್ ವಿರುದ್ಧದ ಟೀಕಾಕಾರರು ಈ ದಾಳಿಯನ್ನು ಸಂಭ್ರಮಿಸುತ್ತಿದ್ದಾರೆ.

ಈ ಅಭೂತಪೂರ್ವ ದಾಳಿಗೆ ಕಾರಣವನ್ನು ಎಫ್‍ಬಿಐ ಬಹಿರಂಗಪಡಿಸಿಲ್ಲ. ಆದರೆ ಟ್ರಂಪ್ ಈ ದಾಳಿಯ ಬಗ್ಗೆ ವಿವರ ನೀಡಿದ್ದು, "ನನ್ನ ಸುಂದರ ಮನೆ.. ಇದೀಗ ದಾಳಿಗೆ ಒಳಗಾಗಿದೆ. ದೊಡ್ಡ ಸಂಖ್ಯೆಯ ಎಫ್‍ಬಿಐ ಏಜೆಂಟರು ಇದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.

"ಅಮೆರಿಕದ ಯಾವ ಅಧ್ಯಕ್ಷರಿಗೂ ಹಿಂದೆಂದೂ ಹೀಗಾಗಿರಲಿಲ್ಲ. ಸಂಬಂಧಪಟ್ಟ ಸರ್ಕಾರಿ ಏಜೆನ್ಸಿಗಳ ಜತೆ ಕಾರ್ಯನಿರ್ವಹಿಸಿ ಸಹಕರಿಸಿದ ಬಳಿಕವೂ, ನನ್ನ ಮನೆಯ ಮೇಲೆ ಈ ಅನಗತ್ಯ ಹಾಗೂ ಅಸಮರ್ಪಕ, ಅಘೋಷಿತ ದಾಳಿ ನಡೆದಿದೆ. ಇದು ತನಿಖಾ ದುರ್ನಡತೆ; ನ್ಯಾಯವ್ಯವಸ್ಥೆಯ ಶಸ್ತ್ರಾಸ್ತ್ರೀಕರಣ ಮತ್ತು 2024ರ ಚುನಾವಣೆಯಲ್ಲಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಬಾರದು ಎಂಬ ಕಾರಣಕ್ಕೆ ಎಡಪಂಥೀಯ ಡೆಮಾಕ್ರಟಿಕ್ ಪಕ್ಷದವರು ನಡೆಸಿದ ದಾಳಿ" ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ಅಭಿವೃದ್ಧಿಶೀಲ ದೇಶಗಳಲ್ಲಿ ಸ್ಥಿರ ಹಾಗೂ ಹೊಸ ಸರ್ಕಾರಗಳಿವೆ. ಇಂಥ ದಾಳಿ ಕೇವಲ ವಿಭಜಿತ, ತೃತೀಯ ಜಗತ್ತಿನ ರಾಷ್ಟ್ರಗಳಷ್ಟೇ ನಡೆಯಲು ಸಾಧ್ಯ ಎಂದು ಹೇಳಿದ್ದಾರೆ. ದುರದೃಷ್ಟವೆಂದರೆ ಅಮೆರಿಕ ಅಂಥ ದೇಶಗಳಲ್ಲಿ ಒಂದಾಗಿದೆ. ಭ್ರಷ್ಟಾಚಾರ ಹಿಂದೆಂದೂ ಕಾಣದ ಮಟ್ಟಕ್ಕೇರಿದೆ. ಅವರು ನನ್ನ ಸುರಕ್ಷತೆಯನ್ನೂ ಉಲ್ಲಂಘಿಸಿದ್ದಾರೆ ಎಂದು ಟ್ರಂಪ್ ದೂರಿರುವುದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News