ಗೋವಿಂದ್ ಪನ್ಸಾರೆ ಹತ್ಯೆ ತನಿಖೆಯಲ್ಲಿ ಯಾವುದೇ ಪ್ರಮುಖ ಪ್ರಗತಿ ಇಲ್ಲ: ಬಾಂಬೆ ಹೈಕೋರ್ಟ್

Update: 2022-08-09 06:57 GMT

ಹೊಸದಿಲ್ಲಿ: ಸಾಮಾಜಿಕ ಕಾರ್ಯಕರ್ತ ಗೋವಿಂದ್ ಪನ್ಸಾರೆ ಹತ್ಯೆಯ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಗಮನಿಸಿದ್ದಾಗಿ ಸೋಮವಾರ PTI ವರದಿ ಮಾಡಿದೆ.

ಫೆಬ್ರವರಿ 16, 2015 ರಂದು ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳಗ್ಗೆ ವಾಕಿಂಗ್‌ ವೇಳೆ ಮನೆಗೆ ಹೋಗುತ್ತಿದ್ದಾಗ ಪನ್ಸಾರೆ ಮೇಲೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ದಾಳಿ ಮಾಡಿದ್ದರು. ನಾಲ್ಕು ದಿನಗಳ ನಂತರ ಅವರು ಬುಲೆಟ್ ಗಾಯಗಳಿಂದ ಮೃತಪಟ್ಟಿದ್ದರು.

ಆಗಸ್ಟ್ 3ರಂದು, ಅಪರಾಧ ತನಿಖಾ ಇಲಾಖೆಯ ವಿಶೇಷ ತನಿಖಾ ತಂಡದಿಂದ ವಿಚಾರಣೆಯನ್ನು ವಹಿಸಿಕೊಳ್ಳುವಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ವಿವರವಾದ ಆದೇಶ ಸೋಮವಾರ ಲಭ್ಯವಾಯಿತು.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಶರ್ಮಿಳಾ ದೇಶಮುಖ್ ಅವರ ಪೀಠವು ಹತ್ಯೆಯ ವಿಚಾರಣೆಗೆ ವಿಶೇಷ ತನಿಖಾ ತಂಡಕ್ಕೆ ಸಾಕಷ್ಟು ಸಮಯ ನೀಡಲಾಗಿದೆ ಎಂದು ಹೇಳಿದೆ. "ತನಿಖೆಯನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಅವಶ್ಯಕ, ಅದು ವಿಫಲವಾದರೆ, ಅಪರಾಧಿಗಳು ಧೈರ್ಯಶಾಲಿಯಾಗುತ್ತಾರೆ" ಎಂದು ಅದು ಹೇಳಿತು.

ಭಯೋತ್ಪಾದನಾ ನಿಗ್ರಹ ದಳಕ್ಕೆ "ತಮ್ಮ ಕೋನದಿಂದ ತನಿಖೆ ಮಾಡಲು" ಅನುವು ಮಾಡಿಕೊಡಲು ಪ್ರಕರಣವನ್ನು ವರ್ಗಾಯಿಸುವುದು ಅಗತ್ಯವಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ತನಿಖಾ ತಂಡ ಎರಡೂ ಮಹಾರಾಷ್ಟ್ರ ಪೊಲೀಸರ ಭಾಗವಾಗಿದ್ದು, ತನಿಖೆಯ ವರ್ಗಾವಣೆಯು ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಅದು ಹೇಳಿದೆ.

"ಕಾಮ್ರೇಡ್ ಪನ್ಸಾರೆ ಅವರ ಕುಟುಂಬವು ಸುಮಾರು ಏಳು ವರ್ಷಗಳಿಂದ ಕಾಯುತ್ತಿದೆ" ಎಂದು ಹೈಕೋರ್ಟ್ ಈ ಸಂದರ್ಭದಲ್ಲಿ ಹೇಳಿತು. " ಈ ನ್ಯಾಯಾಲಯವು 2016 ರಿಂದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಶೂಟರ್‌ಗಳನ್ನು ಬಂಧಿಸಲು ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದಂತೆ SIT ನಿಯಮಿತವಾಗಿ ವರದಿಗಳನ್ನು ಸಲ್ಲಿಸುತ್ತಿದೆ. ಆದರೆ, ಇಲ್ಲಿಯವರೆಗೆ ಅವರು ತಲೆಮರೆಸಿಕೊಂಡಿದ್ದಾರೆ" ಎಂದು ಹೇಳಿತು.

2015ರಿಂದ ಯಾವುದೇ ಪ್ರಗತಿ ಕಾಣದ ಕಾರಣ ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ವರ್ಗಾಯಿಸಬೇಕು ಎಂದು ಗೋವಿಂದ್‌ ಪನ್ಸಾರೆಯವರ ಸೊಸೆ ಮೇಘಾ ಪನ್ಸಾರೆ ಜುಲೈ 7 ರಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News