ಪ್ರಧಾನಿ ಮೋದಿಯವರ ಒಟ್ಟು ಆಸ್ತಿಯಲ್ಲಿ 26 ಲಕ್ಷ ರೂ.ಯಷ್ಟು ಏರಿಕೆ

Update: 2022-08-09 12:19 GMT

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ₹ 2.23 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಕಳೆದ ಬಾರಿಗಿಂತ 26ಲಕ್ಷ ರೂ. ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಬಹುತೇಕ ಬ್ಯಾಂಕ್ ಠೇವಣಿಗಳಾಗಿದ್ದರೆ, ಅವರು ಗಾಂಧಿನಗರದ ಭೂಮಿಯಲ್ಲಿ ತಮ್ಮ ಪಾಲನ್ನು ದಾನ ಮಾಡಿರುವುದರಿಂದ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿಲ್ಲ ಎಂದು ಇತ್ತೀಚಿನ ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ದಾರೆ. 

ಅವರು ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಹೊಂದಿಲ್ಲ. ಯಾವುದೇ ವಾಹನವನ್ನು ಹೊಂದಿಲ್ಲ, ಆದರೆ ₹ 1.73 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ವಿವರದಲ್ಲಿ ನಮೂದಿಸಿದ್ದಾರೆ.

ಪ್ರಧಾನ ಮಂತ್ರಿಗಳ ಕಚೇರಿ (PMO) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ವಿವರಗಳ ಪ್ರಕಾರ, ಮಾರ್ಚ್ 31, 2022 ರಂತೆ ಅವರ ಒಟ್ಟು ಆಸ್ತಿ ₹ 2,23,82,504 ಆಗಿದೆ ಎಂದು ndtv.com ವರದಿಯಲ್ಲಿ ತಿಳಿಸಿದೆ. ಮೋದಿಯವರ ಚರಾಸ್ತಿಯು ಒಂದು ವರ್ಷದಲ್ಲಿ ₹26.13 ಲಕ್ಷದಷ್ಟು ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಮೋದಿ ಅವರ ಬಳಿ ₹1.1 ಕೋಟಿ ಮೌಲ್ಯದ ಸ್ಥಿರಾಸ್ತಿ ಇತ್ತು. ಈಗ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅವರು 2002ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಇತರ ಮೂವರು ಪಾಲುದಾರರೊಂದಿಗೆ ಸೇರಿ ವಸತಿ ಸಮುಚ್ಚಯವನ್ನು ಖರೀದಿಸಿದ್ದರು. ಇತ್ತೀಚಿನ ನವೀಕರಣದ ಪ್ರಕಾರ, "ಸ್ಥಿರ ಆಸ್ತಿ ಸರ್ವೆ ಸಂಖ್ಯೆ 401/A ಅನ್ನು ಮೂರು ಇತರ ಮಾಲೀಕರೊಂದಿಗೆ ಜಂಟಿಯಾಗಿ ನಡೆಸಲಾಗಿದೆ ಮತ್ತು 25 ಶೇಕಡಾದಷ್ಟು ಸಮಾನ ಪಾಲನ್ನು ಹೊಂದಿರುವ ಪ್ರತಿಯೊಬ್ಬರೂ ಅದನ್ನು ದಾನ ಮಾಡಿರುವುದರಿಂದ ಸ್ವಯಂ ಮಾಲೀಕತ್ವವನ್ನು ಹೊಂದಿರುವುದಿಲ್ಲ." ಎಂದು ಉಲ್ಲೇಖಿಸಲಾಗಿದೆ.

ಮಾರ್ಚ್ 31, 2022 ರ ಮಾಹಿತಿಯಂತೆ ಪ್ರಧಾನ ಮಂತ್ರಿಯವರ ಕೈಯಲ್ಲಿ ನಗದು 35,250ರೂ. ಮತ್ತು ಅಂಚೆ ಕಚೇರಿಯಲ್ಲಿ ಅವರ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು 9,05,105 ರೂ. ಮೌಲ್ಯದ್ದಾಗಿದ್ದವು ಮತ್ತು 1,89,305 ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದವು.

ತಮ್ಮ ಆಸ್ತಿಯನ್ನು ಘೋಷಿಸಿದ ಪ್ರಧಾನಿಯವರ ಸಂಪುಟ ಸಹೋದ್ಯೋಗಿಗಳ ಪೈಕಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಚ್ 31, 2022 ರಂತೆ ₹ 2.54 ಕೋಟಿ ಮೌಲ್ಯದ ಚರ ಮತ್ತು 2.97 ಕೋಟಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ಒಟ್ಟು 29 ಕ್ಯಾಬಿನೆಟ್ ಮಂತ್ರಿಗಳಲ್ಲಿ, ಕಳೆದ ಹಣಕಾಸು ವರ್ಷದಲ್ಲಿ ಆಸ್ತಿ ಘೋಷಿಸಿದವರಲ್ಲಿ ಧರ್ಮೇಂದ್ರ ಪ್ರಧಾನ್, ಜ್ಯೋತಿರಾದಿತ್ಯ ಸಿಂಧಿಯಾ, ಆರ್‌ಕೆ ಸಿಂಗ್, ಹರ್ದೀಪ್ ಸಿಂಗ್ ಪುರಿ, ಪರ್ಶೋತ್ತಮ್ ರೂಪಲಾ ಮತ್ತು ಜಿ ಕಿಶನ್ ರೆಡ್ಡಿ ಕೂಡ ಸೇರಿದ್ದಾರೆ.

ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆ ಪ್ರಕರಣ: ಉತ್ತರಪ್ರದೇಶ ಬಿಜೆಪಿ ಮುಖಂಡ ಶ್ರೀಕಾಂತ್‌ ತ್ಯಾಗಿ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News