ಇಸ್ರೇಲ್ ಸೇನೆ ಕಾರ್ಯಾಚರಣೆ: ಇಬ್ಬರು ಪೆಲೆಸ್ತೀನೀಯರ ಹತ್ಯೆ, 40 ಮಂದಿಗೆ ಗಾಯ

Update: 2022-08-09 16:09 GMT
ಸಾಂದರ್ಭಿಕ ಚಿತ್ರ

ನಬ್ಲೂಸ್, ಆ.9: ಆಕ್ರಮಿತ ಪಶ್ಚಿಮ ದಂಡೆಯ ನಬ್ಲೂಸ್ ನಗರದ ಮನೆಯೊಂದರ ಮೇಲೆ ಮಂಗಳವಾರ ಇಸ್ರೇಲ್ ಸೇನೆ ನಡೆಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆ ಸಂದರ್ಭ ಹೋರಾಟ ಪಡೆಯ ಕಮಾಂಡರ್ ಸಹಿತ ಇಬ್ಬರು ಪೆಲೆಸ್ತೀನೀಯರು ಮೃತಪಟ್ಟಿದ್ದಾರೆ ಎಂದು ಸೇನೆಯ ಮೂಲಗಳು ಹೇಳಿವೆ.

ಇಸ್ರೇಲ್ ಸೇನೆ ಮತ್ತು ಇಸ್ಲಾಮಿಕ್ ಜಿಹಾದ್ ಹೋರಾಟಗಾರರ ಪಡೆಯ ನಡುವೆ ಗಾಝಾದಲ್ಲಿ ಆಗಸ್ಟ್ 2ರಿಂದ ನಡೆಯುತ್ತಿದ್ದ ಘರ್ಷಣೆಗೆ ಸಂಬಂಧಿಸಿ ಕದನ ವಿರಾಮ ಜಾರಿಗೊಂಡ 2 ದಿನದ ಬಳಿಕ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯನ್ನು ವಿರೋಧಿಸಿ ಪೆಲೆಸ್ತೀನೀಯರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಗುಂಡಿನ ಚಕಮಕಿಯಲ್ಲಿ ಇಬ್ಬರು ಪೆಲೆಸ್ತೀನೀಯರು ಮೃತಪಟ್ಟಿದ್ದು ಕನಿಷ್ಟ 40 ಮಂದಿ ಗಾಯಗೊಂಡಿದ್ದು 4 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ. ನಬ್ಲೂಸ್ ನಗರದ ಮನೆಯೊಂದರಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರವಾದಿ ಇಬ್ರಾಹಿಂ ಅಲ್ ನಬ್ಲೂಸಿ ಹತನಾಗಿದ್ದು, ಮನೆಯಲ್ಲಿದ್ದ ಮತ್ತೊಬ್ಬ ಉಗ್ರನೂ ಹತನಾಗಿದ್ದಾನೆ.

ಗಲಭೆಕೋರರ ಗುಂಪು ಸೇನೆಯತ್ತ ಸ್ಫೋಟಕ ಹಾಗೂ ಕಲ್ಲೆಸೆತದಲ್ಲಿ ತೊಡಗಿದ್ದರಿಂದ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿದೆ. ಗುಂಪನ್ನು ಚದುರಿಸಲು ಸೇನೆ ಗುಂಡು ಹಾರಾಟ ಸೇರಿ ಸೂಕ್ತ ಕ್ರಮ ಕೈಗೊಂಡಿದೆ. ಹಲವರು ಗಾಯಗೊಂಡಿರುವುದು ದೃಢಪಟ್ಟಿದೆ. ಸೇನೆಯ ಕಡೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಳಿಕ ಸೇನೆ ನಗರದಿಂದ ತೆರಳಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಪಶ್ಚಿಮ ಬ್ಯಾಂಕ್ನಲ್ಲಿ ಆಡಳಿತಾರೂಢ ಫತಾಹ್ ಪಕ್ಷದಡಿ ಕಾರ್ಯನಿರ್ವಹಿಸುವ ಅಲ್ಅಖ್ಸಾ ಧರ್ಮವೀರರ ದಳದ ಕಮಾಂಡರ್ ಆಗಿ ನಬ್ಲೂಸಿ ಕಾರ್ಯನಿರ್ವಹಿಸುತ್ತಿದ್ದ. ಇಸ್ರೇಲ್ ಸೇನೆಯತ್ತ ಪೆಲೆಸ್ತೀನೀಯರು ಕಲ್ಲುಗಳನ್ನು ಎಸೆದ ಹಿನ್ನೆಲೆಯಲ್ಲಿ ನಬ್ಲೂಸ್ನ ವಿವಿಧೆಡೆ ಘರ್ಷಣೆ ಭುಗಿಲೆದ್ದಿದೆ. ಪಶ್ಚಿಮ ದಂಡೆಯ ಅತೀ ದೊಡ್ಡ ನಗರ ನಬ್ಲೂಸ್ನತ್ತ ಹತ್ತಕ್ಕೂ ಅಧಿಕ ಇಸ್ರೇಲ್ ಸೇನಾ ವಾಹನಗಳು ಧಾವಿಸಿ ಬಂದಾಗ ರಸ್ತೆ ಸಂಚಾರಕ್ಕೆ ತಡೆಯಾಗಿದೆ.

ಮಾರ್ಚ್ ಅಂತ್ಯದಿಂದ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ನ ಕಾರ್ಯಾಚರಣೆಯಲ್ಲಿ ಕನಿಷ್ಟ 57 ಪೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News