ಅಮೆರಿಕ: ಟ್ರಂಪ್ ಆಡಳಿತದ ನೀತಿ ರದ್ದು

Update: 2022-08-09 16:38 GMT

ವಾಷಿಂಗ್ಟನ್, ಆ.9: ಅಮೆರಿಕದಲ್ಲಿ ಆಶ್ರಯ ಬಯಸುವವರು ಸಲ್ಲಿಸಿದ ಅರ್ಜಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಅವರು ಮೆಕ್ಸಿಕೋದಲ್ಲಿ ಕಾಯಬೇಕು ಎಂಬ ಟ್ರಂಪ್ ಆಡಳಿತದ ನೀತಿಯನ್ನು ಅಂತ್ಯಗೊಳಿಸುವುದಾಗಿ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (ಗೃಹ ಸಚಿವಾಲಯ) ಸೋಮವಾರ ಘೋಷಿಸಿದೆ. ಟ್ರಂಪ್ ಆಡಳಿತ ಜಾರಿಗೆ ತಂದಿದ್ದ ‘ಮೆಕ್ಸಿಕೋ ನಗರದಲ್ಲಿ ಉಳಿಯಿರಿ’ ಎಂಬ ನೀತಿಯನ್ನು ಅಂತ್ಯಗೊಳಿಸುವುದಕ್ಕೆ ಅಡ್ಡಿಯಾಗಿದ್ದ ತಡೆಯಾಜ್ಞೆಯನ್ನು ನ್ಯಾಯಾಧೀಶರು ತೆರವುಗೊಳಿಸಿದ ಬಳಿಕ ಇಲಾಖೆಯ ಘೋಷಣೆ ಹೊರಬಿದ್ದಿದೆ.

 2019ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಾರಿಗೆ ಬಂದಿದ್ದ ನೀತಿಯನ್ವಯ, ಅಮೆರಿಕದಲ್ಲಿ ಆಶ್ರಯ ಕೋರಿ ಬರುವ ಸಾವಿರಾರು ಮಂದಿ ತಮ್ಮ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ತನಕ ಮೆಕ್ಸಿಕೋದ ಗಡಿಭಾಗದಲ್ಲಿ ಕಾಯಬೇಕಿತ್ತು. ಈ ನೀತಿಯನ್ನು ತ್ವರಿತ ಮತ್ತು ಕ್ರಮಬದ್ಧ ರೀತಿಯಲ್ಲಿ ಹಿಂಪಡೆಯಲಾಗುವುದು.

ನ್ಯಾಯಾಲಯದ ವಿಚಾರಣೆಗಾಗಿ ಗಡಿ ದಾಟಿ ಬಂದವರನ್ನು ಹಿಂದಕ್ಕೆ ಕಳುಹಿಸುವುದಿಲ್ಲ ಮತ್ತು ವಿಚಾರಣೆಗೆ ಹೊಸದಾಗಿ ಯಾರ ಹೆಸರನ್ನೂ ದಾಖಲಿಸಿಕೊಳ್ಳುವುದಿಲ್ಲ ಎಂದು ಇಲಾಖೆ ಹೇಳಿದೆ. 2019ರ ಜನವರಿಯಲ್ಲಿ ಜಾರಿಗೆ ಬಂದಿದ್ದ ಈ ನೀತಿಯಡಿ ಕನಿಷ್ಟ 70,000 ಜನರನ್ನು ಮೆಕ್ಸಿಕೋಗೆ ಕಳುಹಿಸಲಾಗಿದೆ ಎಂದು ಅಮೆರಿಕದ ವಲಸೆ ಸಮಿತಿ ಮಾಹಿತಿ ನೀಡಿದೆ.

ಅಮೆರಿಕಕ್ಕೆ ವಲಸೆ ಬರುವವರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಬೇಕೆಂದು ಟ್ರಂಪ್ ಆಡಳಿತ ಪ್ರತಿಪಾದಿಸಿತ್ತು. 2019ರ ಜನವರಿಯಿಂದ 2021ರ ಜನವರಿ ನಡುವಿನ ಅವಧಿಯಲ್ಲಿ, ಈ ನೀತಿಯಡಿ ಮೆಕ್ಸಿಕೋದ ಗಡಿಭಾಗಕ್ಕೆ ಸಾವಿರಾರು ಮಂದಿಯನ್ನು ಕಳುಹಿಸಲಾಗಿತ್ತು. ಈ ಅವಧಿಯಲ್ಲಿ ಹತ್ಯೆ, ಅತ್ಯಾಚಾರ, ಹಿಂಸೆ, ಅಪಹರಣ, ಹಲ್ಲೆಗೆ ಸಂಬಂಧಿಸಿದ 1,544 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ‘ಹ್ಯೂಮನ್ ರೈಟ್ಸ್ ಫಸ್ಟ್’ ಸಂಘಟನೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News