ಚೀನಾದಲ್ಲಿ 35 ಮಂದಿಗೆ ಹೊಸ 'ಲಂಗ್ಯಾ' ವೈರಸ್ ಸೋಂಕು

Update: 2022-08-10 02:47 GMT

ಬೀಜಿಂಗ್: ಕೋವಿಡ್-19 ಸಾಂಕ್ರಾಮಿಕ ಹಾಗೂ ಮಂಕಿಪಾಕ್ಸ್ ಭೀತಿಯಲ್ಲಿ ವಿಶ್ವ ಸಿಲುಕಿಕೊಂಡಿರುವ ನಡುವೆಯೇ ಚೀನಾದಲ್ಲಿ ಹೊಸ ಪ್ರಬೇಧದ ಪ್ರಾಣಿಜನ್ಯ ವೈರಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪೂರ್ವ ಚೀನಾದ ಹೆನನ್ ಮತ್ತು ಶಾಂಡೊಂಗ್ ಪ್ರಾಂತ್ಯಗಳಲ್ಲಿ ಹೊಸ ಲಂಗ್ಯಾ ಹೆನಿಪಾವೈರಸ್ (ಲೇವಿ) ಸೋಂಕಿನಿಂದ ಈಗಾಗಲೇ 35 ಜನ ಬಳಲುತ್ತಿದ್ದಾರೆ ಎಂದು ದೇಶದ ಅಧಿಕೃತ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಸೋಂಕು ತೀವ್ರವಾದರೆ ಶೇಕಡ 75ರಷ್ಟು ಜನರನ್ನು ಸಾಯಿಸಲು ಶಕ್ತವಾಗಿರುವ ವೈರಸ್ ಕುಟುಂಬಕ್ಕೆ ಈ ಲಂಗ್ಯಾ ವೈರಸ್ ಸೇರಿದೆ. ಆದಾಗ್ಯೂ ಇದುವರೆಗೆ ಯಾವ ಸಾವಿನ ಪ್ರಕರಣಗಳೂ ವರದಿಯಾಗಿಲ್ಲ. ಮೆದು ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಫ್ಲೂ ಲಕ್ಷಣ ರೋಗಿಗಳಲ್ಲಿ ಕಂಡುಬರುತ್ತಿದೆ ಎಂದು ಹೇಳಿದೆ.

ಸದ್ಯಕ್ಕೆ ಲಂಗ್ಯಾ ವೈರಸ್‍ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ಆದರೆ ಇದರಿಂದ ಉದ್ಭವಿಸಬಹುದಾದ ಸಂಕೀರ್ಣತೆಗಳನ್ನು ಬಗೆಹರಿಸಲು ಪೂರಕ ಚಿಕಿತ್ಸೆ ಮಾತ್ರ ಲಭ್ಯವಿದೆ.

ಲಂಗ್ಯಾ ವೈರಸ್ ಮೊಟ್ಟಮೊದಲ ಬಾರಿಗೆ 2019ರಲ್ಲಿ ಮನುಷ್ಯರಲ್ಲಿ ಕಂಡುಬಂದಿದೆ ಎಂದು ಈ ಮುನ್ನ ಪ್ರಕಟಿಸಲಾದ ಅಧ್ಯಯನ ವರದಿಯೊಂದರಲ್ಲಿ ಹೇಳಲಾಗಿದೆ. ಆದರೆ ಈ ವರ್ಷ ಬಹಳಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ವೈರಸ್ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆಯೇ ಎನ್ನುವುದನ್ನು ಚೀನಾದ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ ಎಂದು ಮೈಲ್ ಆನ್‍ಲೈನ್ ವರದಿ ಮಾಡಿದೆ.

ಈ ಸೋಂಕು ಪತ್ತೆಯಾದ ವ್ಯಕ್ತಿಗಳಲ್ಲಿ ಜ್ವರ ಸಾಮಾನ್ಯವಾಗಿ ಕಂಡುಬರುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕಫದ ಸಮಸ್ಯೆ ಶೇಕಡ 50ರಷ್ಟು ರೋಗಿಗಳಲ್ಲಿ ಕಂಡುಬಂದರೆ, ಆಯಾಸ ಶೇಕಡ 54ರಷ್ಟು ರೋಗಿಗಳಲ್ಲಿ, ಹಸಿವೆಯ ಕೊರತೆ ಶೇಕಡ 50 ರೋಗಿಗಳಲ್ಲಿ, ಮಾಂಸಖಂಡದ ನೋವು ಶೇಕಡ 46ರಷ್ಟು ರೋಗಿಗಳಲ್ಲಿ ಮತ್ತು ವಾಕರಿಕೆ ಶೇಕಡ 38ರಷ್ಟು ರೋಗಿಗಳಲ್ಲಿ ಕಂಡುಬರುತ್ತದೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News