ಗ್ರೀಸ್: ಏಜಿಯನ್ ಸಮುದ್ರದಲ್ಲಿ ದೋಣಿ ಮುಳುಗಿ, 50 ವಲಸಿಗರು ನಾಪತ್ತೆ

Update: 2022-08-10 16:36 GMT

ಅಥೆನ್ಸ್,ಆ.10: ಏಜಿಯನ್ ಸಮುದ್ರದಲ್ಲಿರುವ ಗ್ರೀಕ್ ದ್ವೀಪ ಕರ್ಪಾತೊಸ್ನಲ್ಲಿ ವಲಸಿಗರನ್ನು ಒಯ್ಯುತ್ತಿದ್ದ ದೋಣಿಯೊಂದು ಮುಳುಗಿ ಅದರಲಿದ್ದ್ದ ಸುಮಾರು 50 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಟರಕ್ಷಣಾದಳದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಜಲಸಮಾಧಿಯಾದ ದೋಣಿಯಲ್ಲಿ ಸುಮಾರು 80 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ 29 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದ 50 ಮಂದಿ ಕಾಣೆಯಾಗಿದ್ದಾರೆಂದು ಅವರು ಹೇಳಿದ್ದಾರೆ.

 ‌

ವಲಸಿಗರಿದ್ದ ದೋಣಿಯು ಮಂಗಳವಾರ ಟರ್ಕಿಯಿಂದ ನಿರ್ಗಮಿಸಿ, ಇಟಲಿಯತ್ತ ತೆರಳುತ್ತಿದ್ದಾಗ ದುರಂತ ಸಂಭವಿಸಿದೆಯೆನ್ನಲಾಗಿದೆ. ನಾಪತ್ತೆಯಾದವರ ಶೋಧಕ್ಕಾಗಿ ನಾಲ್ಕು ರಕ್ಷಣಾ ದೋಣಿಗಳು, ತಟರಕ್ಷಣಾ ದಳದ ಎರಡು ಗಸ್ತು ದೋಣಿಗಳು ಹಾಗೂ ಗ್ರೀಕ್ ವಾಯುಪಡೆಯ ಒಂದು ಹೆಲಿಕಾಪ್ಟರ್ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.

ಆದಾಗ್ಯೂ ಏಜಿಯನ್ ಸಮುದ್ರ ಪ್ರದೇಶದಲ್ಲಿ ತಾಸಿಗೆ 50 ಕಿ.ಮೀ. ವೇಗದಲ್ಲಿ ಪ್ರಬಲವಾದ ಗಾಳಿ ಬೀಸುತ್ತಿದ್ದು, ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದೆಯೆಂದು ತಟರಕ್ಷಣಾ ದಳದ ವಕ್ತಾರ ನಿಕೊಸ್ ಕೊಕಲಾಸ್ ತಿಳಿಸಿದ್ದಾರೆ. ದೋಣಿಯಲ್ಲಿದ್ದ ವಲಸಿಗರು ಆಫ್ರಿಕ ಹಾಗೂ ಮಧ್ಯಪ್ರಾಚ್ಯ ದೇಶಗಳಿಗೆ ಸೇರಿದವರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News