ಉಕ್ರೇನ್: ಅಣುವಿದ್ಯುತ್ ಸ್ಥಾವರದ ಸಮೀಪ ಶೆಲ್ ದಾಳಿಗೆ ಕನಿಷ್ಠ 13 ಮಂದಿ ಮೃತ್ಯು; ಅಣುಸ್ಥಾವರದ ಸುರಕ್ಷತೆಯ ಬಗ್ಗೆ ಆತಂಕ

Update: 2022-08-10 16:46 GMT
Photo: PTI

  ಕೀವ್,ಆ.10: ರಶ್ಯದ ಅತಿಕ್ರಮಿಸಿರುವ ಉಕ್ರೇನ್  ಡಿನಿಪ್ರೊಪೆಟ್ರೊವ್ಸ್ಕ್ ಪ್ರಾಂತದಲ್ಲಿರುವ ಅಣುವಿದ್ಯುತ್ ಸ್ಥಾವರದ ಸಮೀಪ ನಡೆದ ಮಂಗಳವಾರ ರಾತ್ರಿ ಶೆಲ್ ದಾಳಿಗಳಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಅಣುಸ್ಥಾವರದ ಆಸುಪಾಸಿನಲ್ಲಿ ನಡೆದ ಶೆಲ್ಗಳಿಗೆ ಉಕ್ರೇನ್ ಹಾಗೂ ರಶ್ಯಗಳೆರಡೂ ಪರಸ್ಪರ ದೋಷಾರೋಪ ಮಾಡಿವೆ.

 ರಶ್ಯದ ವಶದಲ್ಲಿರುವ ಅಣುಸ್ಥಾವರದ ಬಳಿ 13 ಮಂದಿಯ ಸಾವಿಗೆ ಕಾರಣವಾದ ರಾಕೆಟ್ ದಾಳಿಗೆ ರಶ್ಯ ಕಾರಣವೆಂದು ಉಕ್ರೇನ್ ಆರೋಪಿಸಿದೆ. ಡಿನಿಪ್ರೊಪೆಟ್ರೊವ್ಸ್ಕ್ನಲ್ಲಿ ಉಭಯ ಸೇನೆಗಳ ನಡುವೆ ಭೀಕರಕದನ ನಡೆಯುತ್ತಿದ್ದು, ಅಣುದುರಂತದ ಅಪಾಯದ ಭೀತಿಯುಂಟಾಗಿದೆ.

  ಅಣುಸ್ಥಾವರದಲ್ಲಿ ರಶ್ಯವು ನೂರಾರು ಸೇನಾಪಡೆಗಳನ್ನು ಜಮಾಯಿಸಿದೆ ಹಾಗೂ ಅಪಾರ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವುದಾಗಿ ಉಕ್ರೇನ್ ಆರೋಪಿಸಿದೆ. ಶೆಲ್ ದಾಳಿಯಲ್ಲಿ ಇತರ 11 ಮಂದಿ ನಾಗರಿಕರು ಗಾಯಗೊಂಡಿದ್ದು ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆಯೆಂದು ಅದು ಹೇಳಿದೆ.

 ‘‘ಅದೊಂದು ಭಯಾನಕ ರಾತ್ರಿಯಾಗಿತ್ತು ಎಂದು ಪ್ರಾದೇಶಿಕ ವ್ಯಾಲೆಂಟನ್ ರೆಝ್ನಿಚೆಂಕೊ ಟೆಲಿಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಶೆಲ್ ದಾಳಿಯಲ್ಲಿ ಬಹುತೇಕ ಸಾವುನೋವುಗಳು ಝಪೊರಿಝ್ಝಿಯಾ ಅಣುವಿದ್ಯುತ್ ಸ್ಥಾವರದ ಸಮೀಪ ಹರಿಯುವ ಡಿನಿಪೆರ್ ನದಿಯಾಚೆಯ ಪಟ್ಟಣವಾದ ಮಾರ್ಗಾನೆಟ್ಸ್ನಲ್ಲಿ ಸಂಭವಿಸಿದೆಯೆಂದು ಮೂಲಗಳು ತಿಳಿಸಿವೆ.    ಝಪೊರಿಝ್ಝಿಯಾ, ಯುರೋಪ್ ಖಂಡಲ್ಲೇ ಅತಿ ದೊಡ್ಡ ಅಣುವಿದ್ಯುತ್ ಸ್ಥಾವರವಾಗಿದೆ. ಶೆಲ್ ದಾಳಿಯಿಂದಾಗಿ ಸ್ಥಳೀಯ ವಿದ್ಯುತ್ ಪೂರೈಕೆ ಕೇಂದ್ರಕ್ಕೆ ಹಾನಿಯಾಗಿದ್ದು, ಸಾವಿರಾರು ಮಂದಿ ವಿದ್ಯುತ್ ಇಲ್ಲದೆ ಬಾಧಿತರಾಗಿದ್ದಾರೆಂದು ಸ್ಥಳೀಯ ಪ್ರಾದೇಶಿಕ ಮಂಡಳಿಯ ಮುಖ್ಯಸ್ಥ ಮಿಕೊಲಾ ಲುಕಾಶುಕ್ ತಿಳಿಸಿದ್ದಾರೆ.

  ಉಕ್ರೇನ್ ಪಡೆಗಳ ಜೊತೆ ಭೀಕರ ಕಾಳಗದ ಬಳಿಕ ರಶ್ಯನ್ ಸೇನೆಯು ಮಾರ್ಚ್ 4ರಂದು ಝಪೊರ್ಝಿಯಾ ಅಣುವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿತ್ತು.

   ಶೆಲ್ ದಾಳಿಯಿಂದಾಗಿ ಝಪೊರ್ಝಿಯಾ ಅಣುವಿದ್ಯುತ್ ಸ್ತಾವರಕ್ಕೆ ಹಾನಿಯಾಗಿಯೆಂಬ ವರದಿಗಳ ಬಗ್ಗೆ ತಾನು ಆತಂಕಗೊಂಡಿರುವುದಾಗಿ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ)ಯ ಮಹಾನಿರ್ದೇಶಕ ರಾಫೆಲ್ ಗ್ರೊಸಿ ತಿಳಿಸಿದ್ದಾರೆ ಹಾಗೂ ಅಣುಸ್ಥಾವರದ ಸುರಕ್ಷತೆ ಹಾಗೂ ಪರಿಶೀಲನೆಗಾಗಿ ಐಎಇಎ ನ ತಜ್ಞರ ತಂಡವೊಂದನ್ನು ಅಲ್ಲಿಗೆ ತುರ್ತಾಗಿ ಕಳುಹಿಸುವುದಕ್ಕೆ ಅವಕಾಶ ನೀಡಬೇಕೆಂದು ಅವರು ‘‘ ಯುರೋಪ್ನ ಅತಿ ದೊಡ್ಡ ಅಣುವಿದ್ಯುತ್ ಸ್ಥಾವರದ ಮೇಲೆ ನಡೆರುವ ಶೆಲ್ ದಾಳಿಯು ತನಗೆ ಆತಂಕವನ್ನುಂಟು ಮಾಡಿದೆ. ಇದರಿಂದ ಅಣುದುರಂತದ ನೈಜ ಅಪಾಯವಿದ್ದು, ಉಕ್ರೇನ್ ಹಾಗೂ ಅದರಾಚೆಗಿನ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರಕ್ಕೆ ಬೆದರಿಕೆಯುಂಟಾಗಬಹುದಾಗಿದೆ’’ ಎಂದು ಗ್ರೋಸ್ಸಿ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕ್ರಿಮಿಯಾ: ರಶ್ಯ ಸೇನಾನೆಲೆಯಲ್ಲಿ ಸ್ಫೋಟ

  ‌

ರಶ್ಯ ಅಧೀನದಲ್ಲಿರುವ ಕ್ರಿಮಿಯಾ ಪರ್ಯಾಯದ್ವೀಪದಲ್ಲಿರುವ ಪ್ರಮುಖ ರಶ್ಯನ್ ಸೇನಾನೆಲೆಯಾದ ಸಾಕಿ ಏರ್ ಫೀಲ್ಡ್ಸ್‌ ನಲ್ಲಿ ಸೋಮವಾರ ಭೀಕರ ಸ್ಫೋಟಗಳು ಸಂಭವಿಸಿವೆ. ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಆದರೆ ಈ ದಾಳಿಯನ್ನು ತಾನು ನಡೆಸಿಲ್ಲವೆಂದು ಉಕ್ರೇನ್ ಸ್ಪಷ್ಟಪಡಿಸಿದೆ. ಕ್ರಿಮಿಯಾದ ಪ್ರತ್ಯೇಕತಾವಾದಿಗಳು ಈ ಸರಣಿ ದಾಳಿಗನ್ನು ನಡೆಸಿರುವ ಸಾಧ್ಯತೆಯಿದೆಯೆಂದು ಅದು ಆರೋಪಿಸಿದೆ. ಶಸ್ತ್ರಾಗಾರಗಳ ನಿರ್ವಹಣೆಯಲ್ಲಿ ರಶ್ಯದ ಅದಕ್ಷತೆಯು ಕೂಡಾ ಈ ಸ್ಪೋಟಗಳಿಗೆ ಕಾರಣವಾಗಿರಬಹುದೆಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರ ಸಲಹೆಗಾರ ಮಿಖೈಲೋ ಪೊಡೊಲ್ಯಾಕ್ ಆಪಾದಿಸಿದ್ದಾರೆ.

  

ಈ ಮಧ್ಯೆ ರಶ್ಯದ ರಕ್ಷಣಾ ಸಚಿವರು ಬುಧವಾರ ಹೇಳಿಕೆಯೊಂದನ್ನು ನೀಡಿ, ಮಿಖೊಲೈವ್ ಪ್ರಾಂತದಲ್ಲಿ ಉಕ್ರೇನ್ ಪಡೆಗಳು ಬಳಸುತ್ತಿರುವ ಜರ್ಮನಿ ಪೂರೈಕೆ ಮಾಡಿರುವ ಜೆಪಾಡ್ ವಿಮಾನ ನಿರೋಧಕ ವ್ಯವಸ್ಥೆಯನ್ನು ರಶ್ಯದ ಸೇನೆ ನಾಪಪಡಿಸಿದೆಯೆಂದು ಹೇಳಿದೆ. ಮಿಖೊಲೈವ್ ಪ್ರಾಂತದಲ್ಲಿ ಉಕ್ರೇನ್ ಸೇನೆಯ ಮೂರು ಯುದ್ಧವಿಮಾನಗಳನ್ನು ಹಾಗೂ ನೆರೆಯ ಖೆರ್ಸೊನ್ ಪ್ರಾಂತದಲ್ಲಿ ಏಳು ಹಿಮಾರ್ಸ್ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News