×
Ad

ಪ್ರಾಣಿಗಳೂ ತಿನ್ನಲಿಕ್ಕಿಲ್ಲ: ಕಳಪೆ ಗುಣಮಟ್ಟದ ಊಟದ ಕುರಿತು ಬೀದಿಯಲ್ಲಿ ನಿಂತು ಅಳುತ್ತಿರುವ ಉತ್ತರಪ್ರದೇಶ ಪೊಲೀಸ್

Update: 2022-08-11 12:23 IST

ಫಿರೋಝಾಬಾದ್: ತನ್ನ ಸುತ್ತ ಹಲವು ಜನರು ನೆರೆದಿರುವಂತೆಯೇ ಉತ್ತರ ಪ್ರದೇಶದ ಫಿರೋಝಾಬಾದ್ (Firozabad) ಜಿಲ್ಲೆಯ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರು ರಸ್ತೆಯಲ್ಲಿ ಆಹಾರದ ತಟ್ಟೆ ಹಿಡಿದುಕೊಂಡು ಪೊಲೀಸ್ ಮೆಸ್‍ನಲ್ಲಿ (Police mess) ಒದಗಿಸಲಾಗುವ ಆಹಾರದ ಗುಣಮಟ್ಟದ ಬಗ್ಗೆ ದೂರುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಾಣಿಸುತ್ತದೆ. ಇನ್ನೊಂದು ವೀಡಿಯೋದಲ್ಲಿ ಡಿವೈಡರ್ ಒಂದರಲ್ಲಿ ಅನ್ನ, ಚಪಾತಿ ಹಾಗೂ ಪಲ್ಯ ಇರುವ ತಟ್ಟೆಯನ್ನು ಕೈಯ್ಯಲ್ಲಿ ಹಿಡಿದುಕೊಂಡಿರುವ ಈತ "ಇದನ್ನು ಪ್ರಾಣಿಗಳು ಕೂಡ ತಿನ್ನಲಿಕ್ಕಿಲ್ಲ" ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಸದ್ಯ ಈ ವೀಡಿಯೊ ವೈರಲ್‌ ಆಗಿದೆ.

ಮನೋಜ್ ಕುಮಾರ್ ಎಂಬ ಹೆಸರಿನ ಪೊಲೀಸ್ ಕಾನ್‍ಸ್ಟೇಬಲ್‍ನ (Police Constable) ಈ ವೀಡಿಯೋ ವೈರಲ್ ಆಗಿದ್ದು ಆಹಾರದ ತಟ್ಟೆ ಕೈಯ್ಯಲ್ಲಿ ಹಿಡಿದುಕೊಂಡು  ಆತ ಅಳುತ್ತಿರುವಂತೆಯೇ ಹಿರಿಯಾಧಿಕಾರಿಯೊಬ್ಬರು ಆತನನ್ನು ಸಮಾಧಾನಿಸಿ ಠಾಣೆಯೊಳಗೆ ಕರೆದೊಯ್ಯಲು ಯತ್ನಿಸುತ್ತಿರುವುದು ಕಾಣಿಸುತ್ತದೆ.

ಆಹಾರದ ಗುಣಮಟ್ಟದ ಬಗ್ಗೆ ಹಿರಿಯಾಧಿಕಾರಿಗಳಿಗೆ ದೂರಿದರೂ ಕ್ರಮಕೈಗೊಂಡಿಲ್ಲ ಎಂದು ಆತ ದೂರಿದ್ದಾನೆ. "ನನ್ನನ್ನು ಕೆಲಸದಿಂದ ತೆಗೆದು ಹಾಕಲಾಗುವುದಾಗಿ ಬೆದರಿಸಲಾಗುತ್ತಿದೆ" ಎಂದೂ ಆತ ಹೇಳಿಕೊಂಡಿದ್ದಾನೆ.

"ಪೊಲೀಸರಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲು ಸರಕಾರ ಅನುದಾನ ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಹಲವಾರು ಗಂಟೆಗಳ ಕರ್ತವ್ಯದ ನಂತರ ನಮಗೆ ದೊರೆಯುತ್ತಿರುವುದು ಇದು, ಸೂಕ್ತ ಆಹಾರ ದೊರೆಯದೇ ಇದ್ದರೆ ಪೊಲೀಸರು ಹೇಗೆ ಕರ್ತವ್ಯ ನಿರ್ವಹಿಸಬಹುದು" ಎಂದು ಆತ ಪ್ರಶ್ನಿಸುತ್ತಾನೆ.

ಆತನ ಕುರಿತು ಫಿರೋಝಾಬಾದ್ ಪೊಲೀಸರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿ ಆತ ಅಶಿಸ್ತಿನ ನಡವಳಿಕೆಯ ಇತಿಹಾಸ ಹೊಂದಿದ್ದಾರೆ, ಅವ್ಯವಹಾರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ 15 ಬಾರಿ ಶಿಕ್ಷೆಗೊಳಗಾಗಿದ್ದಾರೆ ಎಂದು ತಿಳಿಸಿದೆ. ಈ ನಿರ್ದಿಷ್ಟ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News