ಉಚಿತ ವಿತರಣೆ ಗಂಭೀರ ವಿಷಯ, ಇದರಿಂದ ಅರ್ಥ ವ್ಯವಸ್ಥೆಗೆ ನಷ್ಟ: ಸುಪ್ರೀಂಕೋರ್ಟ್

Update: 2022-08-11 14:16 GMT
Photo:PTI

ಹೊಸದಿಲ್ಲಿ, ಆ.11: ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳಿಂದ ಉಚಿತ ಕೊಡುಗೆಗಳ ಭರವಸೆ ಮತ್ತು ವಿತರಣೆ ಗಂಭೀರ ವಿಷಯವಾಗಿದೆ,ಏಕೆಂದರೆ ಇದರಿಂದಾಗಿ ಆರ್ಥಿಕತೆಯು ಹಣವನ್ನು ಕಳೆದುಕೊಳ್ಳುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ಚುನಾವಣೆಗಳ ಸಂದರ್ಭದಲ್ಲಿ ಮತದಾರರಿಗೆ ಆಮಿಷವೊಡ್ಡಲು ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ನೀಡುವುದನ್ನು ನಿಷೇಧಿಸುವಂತೆ ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಚುನಾವಣೆ ಪ್ರಣಾಳಿಕೆಯನ್ನು ನಿಯಂತ್ರಿಸಲು ಮತ್ತು ರಾಜಕೀಯ ಪಕ್ಷಗಳು ನೀಡುವ ಭರವಸೆಗಳಿಗೆ ಅವುಗಳನ್ನೇ ಹೊಣೆಯಾಗಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿದೆ.

‘ಇದು ಸಮಸ್ಯೆಯಲ್ಲ ಎಂದು ಯಾರೂ ಹೇಳುವುದಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿದೆ. ಉಚಿತ ಕೊಡುಗೆಗಳನ್ನು ಪಡೆಯುತ್ತಿರುವವರು ಅವುಗಳನ್ನು ಬಯಸುತ್ತಾರೆ ಮತ್ತು ನಮ್ಮದು ಕಲ್ಯಾಣ ರಾಜ್ಯವಾಗಿದೆ. ತಾವು ತೆರಿಗೆಗಳನ್ನು ಪಾವತಿಸುತ್ತಿದ್ದೇವೆ ಮತ್ತು ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ಕೆಲವರು ಹೇಳಬಹುದು. ಹೀಗಾಗಿ ಇದೊಂದು ಗಂಭೀರ ವಿಷಯವಾಗಿದೆ. ಎರಡೂ ಕಡೆಗಳ ವಾದಗಳನ್ನು ಆಲಿಸುವುದು ಅಗತ್ಯವಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ಭಾರತವು ಬಡತನವಿರುವ ದೇಶವಾಗಿದೆ ಮತ್ತು ಹಸಿದವರಿಗೆ ಆಹಾರ ನೀಡಲು ಕೇಂದ್ರ ಸರಕಾರವೂ ಯೋಜನೆಗಳನ್ನು ಹೊಂದಿದೆ ಎನ್ನುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು, ಆರ್ಥಿಕತೆಯು ಹಣವನ್ನು ಕಳೆದುಕೊಳ್ಳುತ್ತಿದೆ ಮತ್ತು ಜನರ ಕಲ್ಯಾಣವನ್ನು ಸಮತೋಲನಗೊಳಿಸಬೇಕಿದೆ ಎಂದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆ.17ರಂದು ನಡೆಸಲಿದೆ.

ಈ ಮೊದಲು ಅರ್ಜಿಯನ್ನು ವಿರೋಧಿಸಿದ್ದ ಆಪ್, ಅರ್ಹ ಮತ್ತು ವಂಚಿತರ ಸಾಮಾಜಿಕ-ಆರ್ಥಿಕ ಕಲ್ಯಾಣಕ್ಕಾಗಿನ ಯೋಜನೆಗಳನ್ನು ‘ಉಚಿತ ಕೊಡುಗೆಗಳು’ಎಂದು ಬಣ್ಣಿಸುವಂತಿಲ್ಲ ಎಂದು ವಾದಿಸಿತ್ತು. ಅರ್ಜಿದಾರರು ನಿರ್ದಿಷ್ಟ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸುವಲ್ಲಿ ಬಿಜೆಪಿಯೊಂದಿಗೆ ’ಬಲವಾದ ನಂಟು’ ಹೊಂದಿದ್ದಾರೆ ಎಂದೂ ಆಪ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News