ಮೂಢನಂಬಿಕೆಗಳ ಬಗ್ಗೆ ಮಾತನಾಡಿ ಪ್ರಧಾನಿ ತಮ್ಮ ಹುದ್ದೆಯ ಘನತೆ ತಗ್ಗಿಸುತ್ತಿದ್ದಾರೆ: ರಾಹುಲ್ ಗಾಂಧಿ

Update: 2022-08-11 12:20 GMT

ಹೊಸದಿಲ್ಲಿ: ಮೂಢನಂಬಿಕೆಗಳ ಬಗ್ಗೆ ಮಾತನಾಡಿ  ಪ್ರಧಾನಿ ನರೇಂದ್ರ ಮೋದಿ ತಮ್ಮ  ಹುದ್ದೆಯ ಘನತೆಯನ್ನು ತಗ್ಗಿಸುತ್ತಿದ್ದಾರೆ ಮತ್ತು ದೇಶವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

"ತಮ್ಮ `ಕರಾಳ ಕೃತ್ಯಗಳನ್ನು' (ಬ್ಲ್ಯಾಕ್ ಡೀಡ್ಸ್) ಮರೆಮಾಚಲು ಮೋದಿ ಬುಧವಾರ `ವಾಮಾಚಾರದ'(ಬ್ಲ್ಯಾಕ್ ಮ್ಯಾಜಿಕ್) ಬಗ್ಗೆ ಮಾತನಾಡಿದ್ದಾರೆ," ಎಂದು ರಾಹುಲ್ ಟ್ವೀಟ್ ಒಂದರಲ್ಲಿ ಹೇಳಿದ್ದಾರೆ. ಜನಸಾಮಾನ್ಯರು ಪ್ರಧಾನಿಯಿಂದ ಉತ್ತರಗಳಿಗಾಗಿ ಕಾಯುತ್ತಿರುವ ಹಣದುಬ್ಬರ, ನಿರುದ್ಯೋಗ ಮುಂತಾದ ವಿಚಾರಗಳನ್ನು ಪ್ರಧಾನಿ ನಿರ್ಲಕ್ಷ್ಯಿಸಿದ್ದಾರೆ ಎಂದು ಹೇಳಿದರು.

"ಪ್ರಧಾನಿಗೆ ಹಣದುಬ್ಬರ ಕಾಣುತ್ತಿಲ್ಲವೇ?ನಿರುದ್ಯೋಗ ಕಾಣಿಸುತ್ತಿಲ್ಲವೇ?" ಎಂದು ರಾಹುಲ್ ತಮ್ಮ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

ಆಗಸ್ಟ್ 5ರಂದು ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ಬೆಲೆಯೇರಿಕೆ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ಮೋದಿ ವ್ಯಂಗ್ಯವಾಡಿದ ಬೆನ್ನಿಗೆ ರಾಹುಲ್ ಅವರ ಪ್ರತಿಕ್ರಿಯೆ ಬಂದಿದೆ.

"ಕೆಲ ಜನರು ವಾಮಾಚಾರ ಹರಡಲು ಯತ್ನಿಸಿದ್ದನ್ನು ನಾವು ಆಗಸ್ಟ್ 5ರಂದು ನೋಡಿದ್ದೇವೆ" ಎಂದು ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸದೆ ಪ್ರಧಾನಿ ಬುಧವಾರ ಹೇಳಿದ್ದರು. "ಕಪ್ಪು ಬಟ್ಟೆಗಳನ್ನು ಧರಿಸಿದ ಮಾತ್ರಕ್ಕೆ ಅವರು ಹತಾಶೆಯ ಮನೋಭಾವನೆಯನ್ನು ಅಂತ್ಯಗೊಳಿಸಬಹುದೆಂದು ಈ ಜನರು ಅಂದುಕೊಂಡಿದ್ದಾರೆ. ವಾಮಾಚಾರ, ಮಾಟಮಂತ್ರ, ಅಂಧಶ್ರದ್ಧೆ ಮೂಲಕ ಅವರು ಜನರ ವಿಶ್ವಾಸ ಸಂಪಾದಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿಲ್ಲ" ಎಂದು ಪ್ರಧಾನಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News