ಮಹಿಳೆ ಮೇಲೆ ಹಲ್ಲೆ: ಬಿಜೆಪಿ ನಾಯಕ ಶ್ರೀಕಾಂತ್‌ ತ್ಯಾಗಿಗೆ ಜಾಮೀನು ನಿರಾಕರಣೆ

Update: 2022-08-11 11:34 GMT
Photo: Shrikant Tyagi/ Instagram

ನೋಯ್ಡಾ: ಮಹಿಳೆಯೊಬ್ಬರನ್ನು ನಿಂದಿಸಿ ಹಲ್ಲೆಗೈದ ಆರೋಪದ ಮೇಲೆ ಬಿಜೆಪಿ ರಾಜಕಾರಣಿ ಶ್ರೀಕಾಂತ್ ತ್ಯಾಗಿಗೆ ನೋಯ್ಡಾ ನ್ಯಾಯಾಲಯವು ಗುರುವಾರ ಜಾಮೀನು ನಿರಾಕರಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ (Thenewindianexpress.com) ವರದಿ ಮಾಡಿದೆ. ಶಾಸಕರ ಕಾರಿನ ಸ್ಟಿಕ್ಕರ್ ದುರ್ಬಳಕೆ ಸೇರಿದಂತೆ ಆತನ ವಿರುದ್ಧದ ಇತರ ಪ್ರಕರಣಗಳ ವಿಚಾರಣೆ ಆಗಸ್ಟ್ 16 ರಂದು ನಡೆಯಲಿದೆ.

ನೋಯ್ಡಾದ ವಸತಿ ಸಮುಚ್ಚಯದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆತ ಪರಾರಿಯಾಗಿದ್ದ. ಮಂಗಳವಾರ ಉತ್ತರ ಪ್ರದೇಶ ಪೊಲೀಸರು ತ್ಯಾಗಿಯನ್ನು ಮೀರತ್‌ನಲ್ಲಿ ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಆಗಸ್ಟ್ 5 ರಂದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಅಡಿಯಲ್ಲಿ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನ ಬಂಧನದ ನಂತರ, ಆತನ ಮೇಲೆ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಆತ ತನ್ನ ಕಾರಿನ ಮೇಲೆ ಹಿಂದಿಯಲ್ಲಿ "ವಿಧಾಯಕ್" - ಎಂಎಲ್ಎ ಎಂದು ಬರೆಯುವ ಕಾರ್ ಸ್ಟಿಕ್ಕರ್ ಅನ್ನು ಹೊಂದಿದ್ದರಿಂದ ವಂಚನೆ ಪ್ರಕರಣವನ್ನು ಸೇರಿಸಲಾಗಿತ್ತು.

ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆ ಪ್ರಕರಣ: ಉತ್ತರಪ್ರದೇಶ ಬಿಜೆಪಿ ಮುಖಂಡ ಶ್ರೀಕಾಂತ್‌ ತ್ಯಾಗಿ ಬಂಧನ

ಅದಾಗ್ಯೂ, ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ತನಗೆ ಸ್ಟಿಕ್ಕರ್ ನೀಡಿದ್ದರು ಎಂದು ತ್ಯಾಗಿ ಹೇಳಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ತ್ಯಾಗಿಯನ್ನು ಭೇಟಿ ಮಾಡಿಲ್ಲ ಎಂದಿರುವ ಮೌರ್ಯ, ಎಂಎಲ್ಎ ಸ್ಟಿಕ್ಕರ್ ನೀಡಿರುವುದನ್ನು ನಿರಾಕರಿಸಿದ್ದಾರೆ. ಪ್ರಸಾದ್ ಮೌರ್ಯ ಅವರು ಈ ವರ್ಷದ ಆರಂಭದಷ್ಟೇ ಬಿಜೆಪಿ ತೊರೆದಿದ್ದರು.  ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಅವರು ಸೇರಿದ್ದರು.

ಸೊಸೈಟಿಯ ಪ್ರದೇಶದಲ್ಲಿ ನಿಯಮಗಳ ಉಲ್ಲಂಘಿಸಿ ಮರಗಳನ್ನು ನೆಡುವುದನ್ನು ತಡೆಯಲು ಬಂದ ಮಹಿಳೆಯನ್ನು ಅವ್ಯಾಚ್ಯವಾಗಿ ನಿಂದಿಸಿ ತ್ಯಾಗಿ ತಳ್ಳಾಡುವ ವಿಡಿಯೋ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು.

ತ್ಯಾಗಿ ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮತ್ತು ಪಕ್ಷದ ಯುವ ಕಿಸಾನ್ ಸಮಿತಿಯ ರಾಷ್ಟ್ರೀಯ ಸಂಯೋಜಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಆದರೆ, ತ್ಯಾಗಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಿರಾಕರಿಸಿದೆ. ಅದಾಗ್ಯೂ, ತ್ಯಾಗಿ ಪತ್ನಿ ತ್ಯಾಗಿ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವುದನ್ನು ಧೃಡೀಕರಿಸಿರುವುದಾಗಿ TNIE ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News