ವಿಮಾನದೊಳಗಡೆ ಸಿಗರೇಟ್‌ ಸೇದಿದ ಬಾಡಿಬಿಲ್ಡರ್‌ ಬಾಬ್ಬಿ ಕಟಾರಿಯಾ: ವೈರಲ್‌ ವೀಡಿಯೋಗೆ ವ್ಯಾಪಕ ಆಕ್ರೋಶ

Update: 2022-08-11 12:56 GMT
Photo: Twitter screengrab

ಹೊಸದಿಲ್ಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರಭಾವ ಹೊಂದಿರುವ ಬಾಡಿಬಿಲ್ಡರ್ ಬಾಬ್ಬಿ ಕಟಾರಿಯಾ ಸ್ಪೈಸ್‍ಜೆಟ್ ವಿಮಾನದೊಳಗೆ ಸಿಗರೇಟ್ ಸೇದುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಆದರೆ ಇದು ಹಳೆಯ ವೀಡಿಯೋ ಆಗಿದೆ ಹಾಗೂ ಅದು ತಿಳಿದು ಬಂದ ಕೂಡಲೇ ಅವರ ವಿರುದ್ಧ ಆ ಸಮಯದಲ್ಲೇ ಕ್ರಮ ಕೈಗೊಳ್ಳಲಾಗಿತ್ತು ಎಂದು ನಾಗರಿಕ ವಿಮಾನಯಾನ ಸುರಕ್ಷತಾ ಬ್ಯುರೋ ಹೇಳಿದೆ.

ಬಾಬ್ಬಿ ಕಟಾರಿಯಾ ಅವರಿಗೆ ಇನ್‍ಸ್ಟಾಗ್ರಾಂನಲ್ಲಿ 6.3 ಲಕ್ಷ ಫಾಲೋವರ್ಸ್ ಇದ್ದಾರೆ.

ವೀಡಿಯೋ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ "ತನಿಖೆ ನಡೆಸಲಾಗುತ್ತಿದೆ. ಇಂತಹ ಅಪಾಯಕಾರಿ ವರ್ತನೆಯನ್ನು ಸಹಿಸಲಾಗುವುದಿಲ್ಲ" ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಅಖಿಲ ಭಾರತ ತೆರಿಗೆದಾರರ ಸಂಘ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂಬ ಸುದ್ದಿಯ ಸತ್ಯಾಂಶವೇನು?

ಈ ನಿರ್ದಿಷ್ಟ ಘಟನೆ ದುಬೈಯಿಂದ ಹೊಸದಿಲ್ಲಿಗೆ ಈ ವರ್ಷ ಜನವರಿಯಲ್ಲಿ ಕಟಾರಿಯಾ ತೆರಳುತ್ತಿದ್ದ ಸ್ಪೈಸ್‍ಜೆಟ್ ವಿಮಾನದಲ್ಲಿ ನಡೆದಿತ್ತು. ಆಗ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು, ಈಗ ಆ ವೀಡಿಯೋ ಆತನ ಫೇಸ್ಬುಕ್, ಇನ್‍ಸ್ಟಾಗ್ರಾಮ್ ಪುಟದಲ್ಲಿಲ್ಲ ಎಂದು ನಾಗರಿಕ ವಿಮಾನಯಾನ ಸುರಕ್ಷತೆ ಬ್ಯುರೋ ಹೇಳಿದೆ.

ಸ್ಪೈಸ್ ಜೆಟ್ ಕೂಡ ಪ್ರತಿಕ್ರಿಯಿಸಿ ಈ ಘಟನೆಯ ತನಿಖೆ ನಡೆಸಲಾಗಿದೆ, ವೀಡಿಯೋವನ್ನು ಈ ವರ್ಷದ ಜನವರಿ 20ರಂದು ಸೆರೆಹಿಡಿಯಲಾಗಿತ್ತು. ದುಬೈಯಿಂದ ದಿಲ್ಲಿಗೆ ತೆರಳುವ ವಿಮಾನವನ್ನು ಪ್ರಯಾಣಿಕರು ಹತ್ತುತ್ತಿರುವಾಗ ಈ ಘಟನೆ ನಡೆದಿತ್ತು. ಈ ಸಂದರ್ಭ ವಿಮಾನ ಸಿಬ್ಬಂದಿ ತಮ್ಮ ಕೆಲಸದಲ್ಲಿ ವ್ಯಸ್ತರಾಗಿದ್ದರು ಹಾಗೂ 21ನೇ ಸಾಲಿನಲ್ಲಿದ್ದ ಯಾರೋ ವೀಡಿಯೋ ತೆಗೆದಿದ್ದರು. ಜನವರಿ 24ರಂದು ಸಾಮಾಜಿಕ ಜಾಲತಾಣ ಪೋಸ್ಟ್ ಗಳಿಂದ ಅದರ ಬಗ್ಗೆ ತಿಳಿದು ಬಂದಿತ್ತು. ಆಂತರಿಕ ತನಿಖೆ ನಂತರ ಅವರನ್ನು ಫೆಬ್ರವರಿ 2022 ರಲ್ಲಿ 15 ದಿನಗಳ ಕಾಲ ವಿಮಾನದಲ್ಲಿ ಪ್ರಯಾಣಿಸದಂತೆ ನಿರ್ಬಂಧಿಸಲಾಗಿತ್ತು ಎಂದು ಸ್ಪೈಸ್ ಜೆಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News