ಪಂಜಾಬ್‌: ಆರೋಗ್ಯ ಸಚಿವರಿಂದ ಅವಮಾನಕ್ಕೊಳಗಾಗಿದ್ದ ಉಪಕುಲಪತಿ ರಾಜೀನಾಮೆ ಅಂಗೀಕಾರ

Update: 2022-08-11 14:15 GMT
Dr. Raj Bahadur (Photo: Twitter/deepinders87)

ಚಂಡೀಗಢ: ಶಸ್ತ್ರಚಿಕಿತ್ಸಕ ಡಾ ರಾಜ್ ಬಹದ್ದೂರ್ ಅವರು ಫರೀದ್ಕೋಟ್‌ನಲ್ಲಿರುವ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ 12 ದಿನಗಳ ನಂತರ, ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ರಾಜೀನಾಮೆಯನ್ನು ಅಂತಿಮ ಅನುಮೋದನೆಗಾಗಿ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಕಳೆದ ತಿಂಗಳ ಕೊನೆಯಲ್ಲಿ ಆಸ್ಪತ್ರೆಯ ತಪಾಸಣೆಯ ವೇಳೆ ರಾಜ್ಯದ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರು ವೈದ್ಯರನ್ನು "ಅವಮಾನಗೊಳಿಸಿದ" ಮತ್ತು ಆಸ್ಪತ್ರೆಯಲ್ಲಿ ಕೊಳಕು ಹಾಸಿಗೆಯ ಮೇಲೆ ಮಲಗಲು ಒತ್ತಾಯಿಸಿದ ವಿವಾದದ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದರು.

ಈ ಘಟನೆಯು ಸರ್ಕಾರಕ್ಕೆ ದೊಡ್ಡ ಮುಜುಗರವನ್ನುಂಟು ಮಾಡಿತು, ಎಲ್ಲಾ ವರ್ಗದ ಜನರು ಡಾ ರಾಜ್ ಬಹದ್ದೂರ್ ಅವರನ್ನು ಬೆಂಬಲಿಸಿ, ಆರೋಗ್ಯ ಸಚಿವರ ನಡೆಯನ್ನು ಖಂಡಿಸಿದ್ದರು. ಘಟನೆಯ ಮರುದಿನ, ಮುಖ್ಯಮಂತ್ರಿ ಭಗವಂತ್ ಮಾನ್‌‌ ಅವರು ಬಹದ್ದೂರ್ ಅವರೊಂದಿಗೆ ಮಾತನಾಡಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೂ ಸಹ ಡಾ ರಾಜ್ ಬಹದ್ದೂರ್ ಉಪಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ; ಮಹಿಳೆ ಮೇಲೆ ಹಲ್ಲೆ: ಬಿಜೆಪಿ ನಾಯಕ ಶ್ರೀಕಾಂತ್‌ ತ್ಯಾಗಿಗೆ ಜಾಮೀನು ನಿರಾಕರಣೆ

ಡಾ.ಬಹದ್ದೂರ್ ಅವರ ರಾಜಿನಾಮೆಯ ನಿರ್ಧಾರವನ್ನು ಮರುಪರಿಶೀಲಿಸಲು ಮುಖ್ಯಮಂತ್ರಿ ಮಾನ್‌ ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಅವಮಾನಕ್ಕೊಳಗಾದ ವೈದ್ಯರು ನಂತರ ಅದೇ ಸ್ಥಾನದಲ್ಲಿ ಮುಂದುವರಿಸುವುದು ಕಷ್ಟ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಫರೀದ್‌ಕೋಟ್‌ನ ಗುರು ಗೋಬಿಂದ್ ಸಿಂಗ್ ಆಸ್ಪತ್ರೆಯ ಸ್ಕಿನ್ ವಾರ್ಡ್‌ನಲ್ಲಿ ತಪಾಸಣೆಯ ಸಂದರ್ಭದಲ್ಲಿ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರನ್ನು ಕೊಳಕು ಹಾಸಿಗೆಯ ಮೇಲೆ ಮಲಗಲು ಒತ್ತಾಯ ಪಡಿಸಿ ಅವಮಾನಿಸಿದ್ದರು. ಅದರ ಬಳಿಕ ಡಾ. ಬಹದ್ದೂರ್ ಜುಲೈ 30 ರಂದು ರಾಜೀನಾಮೆ ನೀಡಿದ್ದರು. ‌ ಬಹದ್ದೂರ್ ಅವರ ರಾಜೀನಾಮೆಯನ್ನು ಹಿಂಪಡೆಯುವಂತೆ ಮನವೊಲಿಸಲು ಮುಖ್ಯಮಂತ್ರಿಗಳು ಎರಡು ಬಾರಿ ಪ್ರಯತ್ನಿಸಿದ್ದರು. ಫರೀದ್ಕೋಟ್ ಆಸ್ಪತ್ರೆಯಲ್ಲಿ ಘಟನೆ ನಡೆದ ದಿನ ಸಿಎಂ ಅವರಿಗೆ ಕರೆ ಮಾಡಿದ್ದರು. ಇನ್ನೊಮ್ಮೆ ವೈದ್ಯರಿಗೆ ಕರೆ ಮಾಡಿ ಘಟನೆಯನ್ನು ಮರೆತು ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸಹಕರಿಸುವಂತೆ ಕೋರಿದ್ದರು‌ ಎಂದು ವರದಿಯಾಗಿದೆ.

ಅದೇವೇಳೆ, ಘಟನೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕಿತ್ತು ಎಂದು ಮುಖ್ಯಮಂತ್ರಿಗಳು ಆರೋಗ್ಯ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು, ಕೊಳಕು ಹಾಸಿಗೆಗೆ  ಉಪಕುಲಪತಿ ಜವಾಬ್ದಾರರಲ್ಲ ಎಂದು ಭಗವಂತ್‌ ಮಾನ್ ಹೇಳಿದ್ದರು.‌    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News