ದೋಷಯುಕ್ತ ರಾಷ್ಟ್ರಧ್ವಜಗಳ ತಯಾರಕರ ವಿರುದ್ಧ ಕ್ರಮಕ್ಕೆ ಮುಂಬೈ ಮಾಜಿ ಮೇಯರ್ ಆಗ್ರಹ

Update: 2022-08-11 15:15 GMT

ಮುಂಬೈ,ಆ.11:‘ ಹರ್ ಘರ್ ತಿರಂಗಾ’ ಅಭಿಯಾನಕ್ಕಾಗಿ ದೋಷಪೂರಿತ ರಾಷ್ಟ್ರಧ್ವಜಗಳನ್ನು ಪೂರೈಸುತ್ತಿರುವ ತಯಾರಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಾನು ಪ್ರತಿಭಟನೆ ನಡೆಸುವುದಾಗಿ ಶಿವಸೇನೆಯು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ಎಚ್ಚರಿಕೆಯನ್ನು ನೀಡಿದೆ. ಬುಧವಾರ ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ರನ್ನು ಭೇಟಿಯಾದ ಶಿವಸೇನೆಯ ಮಾಜಿ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು,ತಯಾರಕರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದರು.

ತಯಾರಕರು ಬಿಎಂಸಿಗೆ ಪೂರೈಸಿರುವ 40 ಲಕ್ಷ ರಾಷ್ಟ್ರಧ್ವಜಗಳ ಪೈಕಿ ಸುಮಾರು 1.5 ಲ.ಧ್ವಜಗಳು ದೋಷಪೂರಿತವಾಗಿದ್ದು, ಅವುಗಳನ್ನು ಬದಲಿಸುವಂತೆ ಸೂಚನೆಯೊಂದಿಗೆ ತಯಾರಕರಿಗೆ ವಾಪಸ್ ಕಳುಹಿಸಲಾಗಿದೆ.

‘ನಾನು ಈಗಲೂ ನನ್ನ ನಗರದ ಜನರನ್ನು ಪ್ರತಿನಿಧಿಸುತ್ತಿದ್ದೇನೆ ಮತ್ತು ಹಲವಾರು ಮುಂಬಯಿಗರಿಂದ ದೂರುಗಳ ಬಳಿಕ ಬಿಎಂಸಿ ಆಯುಕ್ತರನ್ನು ಭೇಟಿಯಾಗಿದ್ದೆ. ದೋಷಪೂರಿತವಾಗಿರುವ ಈ ರಾಷ್ಟ್ರಧ್ವಜಗಳನ್ನು ತಮ್ಮ ಮನೆಗಳ ಮೇಲೆ ಹಾರಿಸಲು ಯಾರೂ ಬಯಸುವುದಿಲ್ಲ. ಇದು ಅತಿರೇಕದ್ದಾಗಿದೆ ಮತ್ತು ಅಸಾಂವಿಧಾನಿಕವಾಗಿದೆ. ಒಂದೇ ಒಂದು ಧ್ವಜವೂ ಅಗತ್ಯ ಮಾನದಂಡಗಳಿಗೆ ಅನುಗುಣವಾಗಿಲ್ಲ’ ಎಂದು ಪೆಡ್ನೇಕರ್ ಸುದ್ದಿಗಾರರಿಗೆ ತಿಳಿಸಿದರು.

ಆ.1ರಂದು ಬಿಎಂಸಿಯ ಬೇಡಿಕೆಯಂತೆ ಪೂರೈಕೆಯಾಗಿದ್ದ ಮೊದಲ ಕಂತಿನಲ್ಲಿ ದೋಷಪೂರಿತ ರಾಷ್ಟ್ರಧ್ವಜಗಳು ಪತ್ತೆಯಾಗಿದ್ದು, ಅವುಗಳನ್ನು ನಾಗರಿಕರಿಗೆ ವಿತರಿಸಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News