ರಸ್ತೆ ಮೇಲಿನ ಕಾಂಕ್ರೀಟ್‌ ಬ್ಲಾಕ್‌ ತೆರವುಗೊಳಿಸಿದ್ದ ಡೆಲಿವರಿ ಬಾಯ್ ಅನ್ನು ಭೇಟಿಯಾದ ದುಬೈ ಯುವರಾಜ ಶೇಖ್‌ ಹಮ್ದಾನ್

Update: 2022-08-11 16:56 GMT

ದುಬೈ: ದುಬೈನ ಯುವರಾಜ ಹಾಗೂ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್  ಅವರು, ರಸ್ತೆ ಮೇಲಿನ ಕಲ್ಲುಗಳನ್ನು ತೆರವುಗೊಳಿಸಿ ವೈರಲ್‌ ಆಗಿದ್ದ ಪಾಕಿಸ್ತಾನ ಮೂಲದ ಡೆಲಿವರಿ ಬಾಯ್ ಅಬ್ದುಲ್ ಗಫೂರ್ ಅವರನ್ನು ಭೇಟಿ ಮಾಡಿದ್ದಾರೆ.  ಅಬ್ದುಲ್‌ ಗಫೂರ್‌ (Abdul Gafoor) ಅವರು ರಸ್ತೆಯಿಂದ ಎರಡು ಕಾಂಕ್ರೀಟ್ ಬ್ಲಾಕ್‌ಗಳನ್ನು ತೆಗೆದುಹಾಕುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಹಲವಾರು ನೆಟ್ಟಿಗರು ಗಫೂರ್‌ ಅವರ ನಿಸ್ವಾರ್ಥ ಸೇವೆಗೆ ಅಭಿನಂದಿಸಿದ್ದರು. 

ಕಳೆದ ತಿಂಗಳು ದುಬೈಯ ಅಲ್‌ ಕೂಝ್ (Al Quoz) ಭಾಗದ ರಸ್ತೆಯೊಂದರಲ್ಲಿ ಟ್ರಾಫಿಕ್‌ಗೆ ಕಾರಣವಾಗುತ್ತಿದ್ದ ಕಾಂಕ್ರೀಟ್‌ ಇಟ್ಟಿಗೆಗಳನ್ನು ಡೆಲಿವರಿ ಬಾಯ್‌ ಗಫೂರ್‌ ತೆರವು ಗೊಳಿಸಿದ್ದರು. ರಸ್ತೆಯಲ್ಲಿದ್ದ ಎಲ್ಲಾ ವಾಹನಗಳು ಹೋಗುವ ತನಕ ಕಾದು ನಿಂತ ಗಫೂರ್‌ ಬಳಿಕ ರಸ್ತೆಯಲ್ಲಿ ಬಿದ್ದಿದ್ದ ಎರಡು ಕಲ್ಲುಗಳನ್ನು ಎತ್ತಿ ರಸ್ತೆ ಬದಿಗೆ ಹಾಕಿದ್ದರು, ಬಳಿಕ ತಮ್ಮ ದ್ವಿಚಕ್ರ ವಾಹನ ಹತ್ತಿ ಹೋಗಿದ್ದರು. ಇದನ್ನು ಬೇರೆ ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದರು. ಆದರೆ, ವಿಡಿಯೋದಲ್ಲಿ ಗಫೂರ್‌ ಅವರ ಮುಖ ಹೆಲ್ಮೆಟ್‌ ಧರಿಸಿದ್ದರಿಂದ ಪತ್ತೆಯಾಗಿರಲಿಲ್ಲ. ಘಟನೆ ನಡೆದು ಎರಡು ವಾರಗಳ ತನಕ ಗಫೂರ್‌ ಗೆ ತನ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಷಯ ಗೊತ್ತಿರಲಿಲ್ಲ‌ ಎಂದು gulfnews.com ವರದಿಯಲ್ಲಿ ತಿಳಿಸಿದೆ. 

ಇದನ್ನೂ ಓದಿ:  ವಿವಾಹಿತ ಹೆಣ್ಣುಮಕ್ಕಳು ವಿಮೆಗೆ ಅರ್ಹರು: ಹೈಕೋರ್ಟ್ ಆದೇಶ

ಈ ವೀಡಿಯೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದ ಕ್ರೌನ್‌ ಪ್ರಿನ್ಸ್‌, “ದುಬೈನಲ್ಲಿ ಒಳ್ಳೆಯತನದ ಈ ಕಾರ್ಯವು ಪ್ರಶಂಸೆಗೆ ಅರ್ಹವಾಗಿದೆ. ಯಾರಾದರೂ ಈ ವ್ಯಕ್ತಿಯನ್ನು ನನಗೆ ತೋರಿಸಬಹುದೇ?” ಎಂದು ಮನವಿ ಮಾಡಿದ್ದರು.  ಸ್ವಲ್ಪ ಸಮಯದ ಬಳಿಕ ಗಫೂರ್‌ ಅವರ ಚಿತ್ರವನ್ನು ಹಂಚಿಕೊಂಡ ಯುವರಾಜ, “ಉತ್ತಮ ವ್ಯಕ್ತಿ ಸಿಕ್ಕಿದ್ದಾರೆ. ಧನ್ಯವಾದ ಗಫೂರ್‌, ಶೀಘ್ರವೇ ನಾವು ಒಮ್ಮೆ ಭೇಟಿಯಾಗೋಣ” ಎಂದು ಟ್ವೀಟ್‌ ಮಾಡಿದ್ದರು. 

ಆ ವೇಳೆ ಯುನೈಟೆಡ್‌ ಕಿಂಗ್ಡಂನಲ್ಲಿದ್ದ ಯುವರಾಜ ಹಮ್ದಾನ್ ಸದ್ಯ ಯುಎಇಗೆ ಮರಳಿದ್ದು ಅಬ್ದುಲ್‌ ಗಫೂರ್ ರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಅವರೊಂದಿಗಿರುವ ಚಿತ್ರವನ್ನು ಹಂಚಿಕೊಂಡಿರುವ ಹಮ್ದಾನ್, “ಅಬ್ದುಲ್‌ ಗಪೂರ್‌, ನಿಮ್ಮನ್ನು ಭೇಟಿಯಾಗುವುದು ಗೌರವವಾಗಿದೆ, (ಗಪೂರ್)‌ ನಾವೆಲ್ಲರೂ ಅನುಸರಿಸಬೇಕಾದ ನಿಜವಾದ ಮಾದರಿ” ಎಂದು ಟ್ವೀಟ್‌ ಮಾಡಿದ್ದಾರೆ. 

ಗಫೂರ್‌ ಅವರಿಗೆ ಅವರು ಕೆಲಸ ಮಾಡುತ್ತಿರುವ ತಲಬತ್ (Talabat) ಸಂಸ್ಥೆಯು ಊರಿಗೆ ಟಿಕೆಟ್‌ ಅನ್ನು ಉಡುಗೊರೆಯಾಗಿ ನೀಡಿದೆ. ಈ ಹಿಂದೆ ಯುವರಾಜ ಹಮ್ದಾನ್‌ ಬೆಕ್ಕೊಂದನ್ನು ರಕ್ಷಿಸಿದ್ದ ನಾಲ್ವರು ಅನಿವಾಸಿಗಳಿಗೆ ತಲಾ 10 ಲಕ್ಷ ರೂ. ಉಡುಗೊರೆ ನೀಡಿದ್ದರು. 

ಇದನ್ನೂ ಓದಿ: ಮನುಸ್ಮೃತಿ ಭಾರತೀಯ ಮಹಿಳೆಯರಿಗೆ ಗೌರವಾನ್ವಿತ ಸ್ಥಾನವನ್ನು ನೀಡಿದೆ: ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಸಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News