ಚೀನಾದ ಯುದ್ಧಬೆದರಿಕೆ ಹಿನ್ನೆಲೆಯಲ್ಲಿ ಮತ್ತೆ ಸಮರಾಭ್ಯಾಸ ನಡೆಸಿದ ತೈವಾನ್

Update: 2022-08-11 15:59 GMT

ತೈಪೆ, ಆ.11: ತೈವಾನ್ ಸುತ್ತಮುತ್ತ ತಾನು ಕೈಗೊಂಡಿದ್ದ ಬೃಹತ್ ಪ್ರಮಾಣದ ಸಮರಾಭ್ಯಾಸ ಅಂತ್ಯಗೊಂಡಿದ್ದರೂ ಯುದ್ಧ ಸಿದ್ಧತೆ ಮುಂದುವರಿದಿದೆ ಎಂದು ಚೀನಾ ಘೋಷಿಸಿರುವ ಬೆನ್ನಿಗೇ, ಗುರುವಾರ ತೈವಾನ್ ಸೇನೆ ಮತ್ತೊಂದು ಸುತ್ತಿನ ಸಮರಾಭ್ಯಾಸ ನಡೆಸಿದೆ ಎಂದು ಮೂಲಗಳು ಹೇಳಿವೆ.

8ನೇ ಆರ್ಮಿಕಾರ್ಪ್ಸ್ ತುಕಡಿ ಗುರುವಾರ ಬೆಳಿಗ್ಗೆ ಹೊವಿಟ್ಝರ್ಸ್ ಫಿರಂಗಿಗಳ ಮೂಲಕ ಉದ್ದೇಶಿತ ಗುರಿಗೆ ದಾಳಿ ನಡೆಸುವ ರಕ್ಷಣಾತ್ಮಕ ‘ಲೈವ್ ಫೈರ್’ (ಜೀವಂತ ಮದ್ದುಗುಂಡು, ಫಿರಂಗಿ ಬಳಸಿ ಅಭ್ಯಾಸ) ಸಮರಾಭ್ಯಾಸ ನಡೆಸಲಾಗಿದೆ. ದಕ್ಷಿಣದ ತುದಿಯಲ್ಲಿರುವ ಪಿಂಗ್ಟುಂಗ್ನಲ್ಲಿ 1 ಗಂಟೆ ಸಮರಾಭ್ಯಾಸ ನಡೆದಿದೆ. ಸಮುದ್ರದ ದಡದಲ್ಲಿ ಸಾಲಾಗಿ ನಿಲ್ಲಿಸಿದ ಫಿರಂಗಿಯಿಂದ ಸಮುದ್ರದ ನಡುವಿನ ಗುರಿಗೆ ಯೋಧರು ಸರದಿ ಪ್ರಕಾರ ಗುರಿಯಿಟ್ಟರು ಎಂದು ಸೇನೆಯ ವಕ್ತಾರ ಲೂವ್ ವೊಯಿ-ಜೆಯ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಮಂಗಳವಾರವೂ ಸಮರಾಭ್ಯಾಸ ನಡೆಸಿದ್ದು ಇದು ನಿಗದಿತ ವ್ಯಾಯಾಮವಾಗಿದೆ. ಇದಕ್ಕೆ ಎರಡು ಉದ್ದೇಶಗಳಿವೆ. ಮೊದಲನೆಯದ್ದು ನಮ್ಮ ಫಿರಂಗಿಗಳ ಸುಸ್ಥಿತಿಯನ್ನು ಪ್ರಮಾಣೀಕರಿಸುವುದು, ಎರಡನೆಯದು ಕಳೆದ ವರ್ಷ ನಡೆಸಿದ್ದ ವಾರ್ಷಿಕ ಸಮರಾಭ್ಯಾಸದ ಫಲಿತಾಂಶವನ್ನು ಉಳಿಸಿಕೊಳ್ಳುವುದು ಎಂದವರು ಹೇಳಿದ್ದಾರೆ. ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಗೆ ಆಕ್ರೋಶ ವ್ಯಕ್ತಪಡಿಸಿದ್ದ ಚೀನಾ, ತೈವಾನ್ ಜಲಸಂಧಿಯಲ್ಲಿ ತೈವಾನ್ ಸುತ್ತಮುತ್ತ ವಾಯು ಮತ್ತು ಸಮುದ್ರ ಪ್ರದೇಶ ಸೇರಿದಂತೆ ಬೃಹತ್ ಸಮರಾಭ್ಯಾಸ ನಡೆಸಿತ್ತು. ಪೆಲೋಸಿ ಭೇಟಿಯ ನೆಪದಲ್ಲಿ ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಸಿದ್ಧತೆ ನಡೆಸುತ್ತಿದೆ ಎಂದು ತೈವಾನ್ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News