ಚೆನ್ನೈ: ಮಹಿಳೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನ

Update: 2022-08-12 02:09 GMT
ಸಾಂದರ್ಭಿಕ ಚಿತ್ರ (PTI)

ಚೆನ್ನೈ: ನಲುವತ್ತು ವರ್ಷ ವಯಸ್ಸಿನ ಮಹಿಳೆಯನ್ನು ಅಪಹರಿಸಿ, ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತಂಬರಂ- ಮದುರವೊಯಲ್ ಎಕ್ಸ್‍ಪ್ರೆಸ್ ಹೈವೇ ಬೈಪಾಸ್‍ನ ತೆಲ್ಲಿಯರ್ ಅಗರಂ ಎಂಬಲ್ಲಿ ಬೆಳಕಿಗೆ ಬಂದಿದೆ.

ತನ್ನ ಕುಟುಂಬ ಸ್ನೇಹಿತನ ಜತೆ ಮಹಿಳೆ ಕಾರಿನಲ್ಲಿ ಬರುತ್ತಿದ್ದಾಗ ರಾತ್ರಿ 11.30ರ ವೇಳೆಗೆ ತೆಲ್ಲಿಯಾರ್ ಅಗರಂ ಬಳಿ ವ್ಯಕ್ತಿಯೊಬ್ಬ ಕಾರು ನಿಲ್ಲಿಸುವಂತೆ ಸನ್ನೆ ಮಾಡಿದೆ. ಕಾರು ನಿಲ್ಲಿಸಿದ ತಕ್ಷಣ ಇತರ ಐವರು ಕೂಡಿಕೊಂಡು ಕಾರಿನ ಚಾಲಕನನ್ನು ಥಳಿಸಿ, ಕೂಗಿಕೊಂಡರೆ ಕೊಲೆ ಮಾಡುವುದಾಗಿ ಮಹಿಳೆಯನ್ನು ಬೆದರಿಸಿದರು. ಸ್ವಲ್ಪ ದೂರ ಕಾರು ಚಲಾಯಿಸಿಕೊಂಡು ಹೋದ ಅಪಹರಣಕಾರರು ಕಾರಿನಲ್ಲಿದ್ದ ವ್ಯಕ್ತಿಯನ್ನು ಹೊರಕ್ಕೆ ತಳ್ಳಿದರು. ನಿರ್ಜನ ಪ್ರದೇಶಕ್ಕೆ ಕಾರನ್ನು ಕೊಂಡೊಯ್ದು ಮಹಿಳೆಯ 15 ಸೊವರಿನ್ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಪೊಲೀಸರು ಹೇಳಿದ್ದಾರೆ.

ಕಾರಿನಿಂದ ತಳ್ಳಲ್ಪಟ್ಟ ವ್ಯಕ್ತಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ವಿಷಯ ತಿಳಿಸಿದ. ಪೊಲೀಸರು ಸ್ಥಳಕ್ಕೆ ಧಾವಿಸಿ ಒಬ್ಬ ಅತ್ಯಾಚಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇತರರು ತಪ್ಪಿಸಿಕೊಂಡರು. ಬಂಧಿತ ವ್ಯಕ್ತಿ ನೀಡಿದ ಮಾಹಿತಿ ಆಧಾರದಲ್ಲಿ ಇತರ ಐವರನ್ನೂ ಬಂಧಿಸಲಾಗಿದೆ. ಎಲ್ಲ ಆರೋಪಿಗಳು ಮದ್ಯಪಾನ ಮತ್ತು ಗಾಂಜಾ ಸೇವಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಆರೋಪಿಗಳಿಂದ 13 ಸೊವರಿನ್ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅತ್ಯಾಚಾರ ಮತ್ತು ದರೋಡೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಆಘಾತದಿಂದ ಚೇತರಿಸಿಕೊಳ್ಳಲು ಮಹಿಳೆಗೆ ಕೌನ್ಸಿಲಿಂಗ್ ಕೂಡಾ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಮಹಿಳೆ ಹಾಗೂ ಆಕೆಯ ಪತಿ, ಮಕ್ಕಳು ಆಕೆಯ ಹುಟ್ಟೂರಿಗೆ ದೇವಸ್ಥಾನದ ಜಾತ್ರೆಯೊಂದಕ್ಕೆ ಹೋಗಿದ್ದರು. ಪತಿ ಹಾಗೂ ಮಕ್ಕಳು ರಾತ್ರಿ 10ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ವಾಪಸ್ಸಾಗಿದ್ದರು, ಸ್ನೇಹಿತನ ಜತೆ ಕಾರಿನಲ್ಲಿ ಬರುವುದಾಗಿ ಹೇಳಿ ಮಹಿಳೆ ಉಳಿದುಕೊಂಡಿದ್ದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News