ಬಟ್ಟೆ ಬಿಚ್ಚಿಸಿ ಮಹಿಳೆಗೆ ಥಳಿತ: ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ

Update: 2022-08-12 03:29 GMT

ಭೋಪಾಲ್: ಮಧ್ಯಪ್ರದೇಶ(Madhya Pradesh)ದ ಝಬೂವಾ ಜಿಲ್ಲೆಯ ಗ್ರಾಮವೊಂದರಲ್ಲಿ ಬುಡಕಟ್ಟು ಜನಾಂಗ(tribal community)ಕ್ಕೆ ಸೇರಿದ ಮಹಿಳೆಯೊಬ್ಬರ ಬಟ್ಟೆ ಬಿಚ್ಚಿಸಿ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರೂ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೂಲಿಕಾರ್ಮಿಕರು ಎಂದು ಪೊಲೀಸರು ಹೇಳಿದ್ದಾರೆ.

ರೂಪರೆಲ್ ಗ್ರಾಮದ ನಿವಾಸಿಯಾಗಿದ್ದ ಮಹಿಳೆ ಕೆಲ ತಿಂಗಳ ಹಿಂದೆ ಗಂಡನನ್ನು ತೊರೆದು ಹೋಗಿ ಮುಕೇಶ್ ಎಂಬ ಮತ್ತೊಬ್ಬ ಪುರುಷನ ಜತೆ ವಾಸವಿದ್ದಳು. ಬುಧವಾರ ತನ್ನ ಗಂಡನ ಮನೆಗೆ ಮಹಿಳೆ ಮರಳಿದಳು. ಇದು ಮುಕೇಶ್‍ನ ಕೋಪಕ್ಕೆ ಕಾರಣವಾಯಿತು. ಇತರ ಕೆಲ ಮಂದಿಯನ್ನು ಕೂಡಿಕೊಂಡು ಗ್ರಾಮಕ್ಕೆ ಬಂದ ಆತ, ಮಹಿಳೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಹಲವು ಮಂದಿಯ ಗುಂಪೊಂದು ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಿಸಿ ರಾಡ್‍ನಿಂದ ಹೊಡೆಯುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇತರ ಕೆಲ ಮಂದಿ ಮಧ್ಯಪ್ರವೇಶಿಸುವ ಪ್ರಯತ್ನದಲ್ಲಿರುವುದೂ ಕಾಣಿಸುತ್ತಿತ್ತು. ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಪೊಲೀಸರು ಮಹಿಳೆಯನ್ನು ಪೆತ್ಲವಾಡ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಮುಕೇಶ್ ತನಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಗಂಡನ ಮನೆಗೆ ವಾಪಾಸ್ಸು ಬಂದಿದ್ದಾಗಿ ಮಹಿಳೆ ಹೇಳಿದ್ದಾರೆ. ಆಕೆಯ ಗಂಡ ಆಕೆಯನ್ನು ಮತ್ತೆ ಸ್ವೀಕರಿಸಿದ್ದು, ಮುಕೇಶ್ ಮತ್ತೆ ಬಂದು ಗಲಾಟೆ ಮಾಡಿದ್ದಾನೆ ಎಂದು ಜಿಲ್ಲಾ ಎಸ್ಪಿ ಅರವಿಂದ್ ತಿವಾರಿ ವಿವರ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News