ಚೀನಿ ನೌಕೆಗೆ ಅವಕಾಶ ನೀಡದಂತೆ ತಾನು ಶ್ರೀಲಂಕಾ ಮೇಲೆ ಒತ್ತಡ ಹೇರಿದ್ದೆ ಎಂಬ ಚೀನಾದ ಹೇಳಿಕೆಗೆ ಭಾರತದ ತಿರಸ್ಕಾರ

Update: 2022-08-12 16:16 GMT

ಹೊಸದಿಲ್ಲಿ.ಆ.12: ಚೀನಿ ಸಂಶೋಧನಾ ನೌಕೆ ಯುವಾನ್ ವಾಂಗ್ 5 ದ್ವೀಪರಾಷ್ಟ್ರದ ಹಂಬನತೋಟ್ ಬಂದರಿನಲ್ಲಿ ತಂಗಲು ಅವಕಾಶ ನೀಡದಂತೆ ತಾನು ಶ್ರೀಲಂಕಾದ ಮೇಲೆ ಒತ್ತಡ ಹೇರಿದ್ದೆ ಎಂಬ ಚೀನಾದ ಹೇಳಿಕೆಯನ್ನು ಭಾರತವು ಶುಕ್ರವಾರ ತಿರಸ್ಕರಿಸಿದೆ.

‘ಭಾರತದ ಕುರಿತು ಹೇಳಿಕೆಯಲ್ಲಿನ ಪರೋಕ್ಷ ಸೂಚನೆಗಳನ್ನು ನಾವು ತಿರಸ್ಕರಿಸುತ್ತೇವೆ ’ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಶ್ರೀಲಂಕಾ ಸಾರ್ವಭೌಮ ದೇಶವಾಗಿದೆ ಮತ್ತು ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಆ.8ರಂದು ಚೀನಾ,ಇತರ ದೇಶಗಳು ಭದ್ರತಾ ಕಳವಳಗಳನ್ನು ಉಲ್ಲೇಖಿಸಿ ಶ್ರೀಲಂಕಾದ ಮೇಲೆ ಒತ್ತಡ ಹೇರುವುದು ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ತೀರ ಹಸ್ತಕ್ಷೇಪ ಮಾಡುವುದು ಎಳ್ಳಷ್ಟೂ ಸಮರ್ಥನೀಯವಲ್ಲ ಎಂದು ಭಾರತವನ್ನು ಹೆಸರಿಸದೆ ಹೇಳಿತ್ತು.

ಶ್ರೀಲಂಕಾ ತನ್ನ ಅಭಿವೃದ್ಧಿ ಹಿತಾಸಕ್ತಿಗಳನ್ನು ಆಧರಿಸಿ ಇತರ ದೇಶಗಳೊಂದಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದರು.

ಶ್ರೀಲಂಕಾದ ಹಂಬನತೋಟ್ ಬಂದರಿನಲ್ಲಿ ಆ.11ರಿಂದ ಆ.17ರ ನಡುವೆ ಚೀನಿ ನೌಕೆ ತಂಗುವ ಕುರಿತು ಭಾರತ ಸರಕಾರವು ಭದ್ರತಾ ಕಳವಳಗಳನ್ನು ಎತ್ತಿದೆ. ತನ್ನ ಬಂದರುಗಳಲ್ಲಿ ಚೀನಿ ನೌಕೆ ತಂಗಲು ಅವಕಾಶ ನೀಡದಂತೆ ಭಾರತವು ಶ್ರೀಲಂಕಾಕ್ಕೆ ಸೂಚಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿದ ಬಳಿಕ ಚೀನಾದ ಈ ಹೇಳಿಕೆ ಹೊರಬಿದ್ದಿತ್ತು.

ನಂತರದಲ್ಲಿ ಶ್ರೀಲಂಕಾ ನೌಕೆಯ ಭೇಟಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಚೀನಾವನ್ನು ಆಗ್ರಹಿಸಿತ್ತು. ದ್ವೀಪರಾಷ್ಟ್ರವು ಆರಂಭದಲ್ಲಿ ಚೀನಿ ಸಂಶೋಧನಾ ನೌಕೆಗೆ ಇಂಧನ ಮರುಪೂರಣಕ್ಕಾಗಿ ಜು.12ರಂದು ತನ್ನ ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನೀಡಿತ್ತು.

‘ಭಾರತ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸಲು ಆಧಾರವಾಗಿ ಪರಸ್ಪರ ಗೌರವ,ಪರಸ್ಪರ ಸಂವೇದನಾಶೀಲತೆ ಮತ್ತು ಪರಸ್ಪರ ಹಿತಾಸಕ್ತಿಗಳ ಅಗತ್ಯಕ್ಕೆ ನಮ್ಮ ಸರಕಾರವು ಯಾವಾಗಲೂ ಒತ್ತು ನೀಡಿದೆ ’ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಬಾಗ್ಚಿ,‘ನಮ್ಮ ಭದ್ರತಾ ಕಳವಳಗಳಿಗೆ ಸಂಬಂಧಿಸಿದಂತೆ ಇದು ಪ್ರತಿಯೊಂದು ದೇಶದ ಸಾರ್ವಭೌಮ ಹಕ್ಕು ಆಗಿದೆ. ನಮ್ಮ ಸ್ವಂತ ಹಿತಾಸಕ್ತಿಯಲ್ಲಿ ನಾವು ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಇದು ಸಹಜವಾಗಿಯೇ ನಮ್ಮ ಪ್ರದೇಶದಲ್ಲಿ,ವಿಶೇಷವಾಗಿ ಗಡಿ ಪ್ರದೇಶಗಳಲ್ಲಿಯ ಪ್ರಚಲಿತ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ ’ಎಂದರು.

               

ಏಕಪಕ್ಷೀಯ ಕ್ರಮಗಳನ್ನು ತಪ್ಪಿಸಿ

 ಚೀನಾ-ತೈವಾನ್ ನಡುವೆ ಉದ್ವಿಗ್ನತೆ ಕುರಿತು ಭಾರತದ ಮೊದಲ ಪ್ರತಿಕ್ರಿಯೆಯನ್ನು ಬಾಗ್ಚಿ ಸುದ್ದಿಗೋಷ್ಠಿಯಲ್ಲಿ ನೀಡಿದರು. ಪ್ರದೇಶದಲ್ಲಿಯ ಬೆಳವಣಿಗೆಗಳ ಬಗ್ಗೆ ಭಾರತವು ಕಳವಳಗಳನ್ನು ಹೊಂದಿದೆ ಎಂದು ತಿಳಿಸಿದ ಅವರು,‘ಸಂಯಮವನ್ನು ಕಾಯ್ದುಕೊಳ್ಳುವಂತೆ,ಯಥಾಸ್ಥಿತಿಯನ್ನು ಬದಲಿಸಲು ಏಕಪಕ್ಷೀಯ ಕ್ರಮಗಳನ್ನು ತಪ್ಪಿಸುವಂತೆ,ಉದ್ವಿಗ್ನತೆಯನ್ನು ಶಮನಿಸುವಂತೆ ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವಂತೆ ನಾವು ಆಗ್ರಹಿಸುತ್ತೇವೆ ’ ಎಂದು ಹೇಳಿದರು.

ಆ.2ರಂದು ದ್ವೀಪರಾಷ್ಟ್ರಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿಯವರ ಭೇಟಿಗೆ ಪ್ರತಿಯಾಗಿ ಚೀನಾ ತೈವಾನ್ ಸಮೀಪ ಹಲವಾರು ಲೈವ್-ಫೈರ್ ಮಿಲಿಟರಿ ಕವಾಯತುಗಳನ್ನು ನಡೆಸಿತ್ತು. ಚೀನಾದ ಬೆದರಿಕೆಗಳ ಹೊರತಾಗಿಯೂ ಪೆಲೋಸಿ 25 ವರ್ಷಗಳಲ್ಲಿ ತೈವಾನ್ಗೆ ಭೇಟಿ ನೀಡಿದ ಅಮೆರಿಕದ ಅತ್ಯುನ್ನತ ಅಧಿಕಾರಿಯಾಗಿದ್ದಾರೆ.

ತೈವಾನ್ ಅನ್ನು ತನ್ನ ಪ್ರಾಂತ್ಯವೆಂದು ಪರಿಗಣಿಸಿರುವ ಚೀನಾ,ಅದು ತನ್ನ ಮುಖ್ಯಭೂಮಿಯೊಂದಿಗೆ ಏಕೀಕೃತಗೊಳ್ಳಬೇಕು ಎಂದು ಪ್ರತಿಪಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News