ಎಲ್ಲಾ ರಶ್ಯನ್ನರ ವೀಸಾ ನಿಷೇಧಕ್ಕೆ ಯುರೋಪಿಯನ್‌ ಯೂನಿಯನ್ ಚಿಂತನೆ

Update: 2022-08-12 16:19 GMT

ಪ್ರೇಗ್, ಆ.೧೨: ರಶ್ಯದ ಎಲ್ಲಾ ಪ್ರಯಾಣಿಕರ ವೀಸಾದ ಮೇಲೆ ಸಂಪೂರ್ಣ ನಿಷೇಧವು ಯುರೋಪಿಯನ್ ಯೂನಿಯನ್ನ ಮುಂದಿನ ಹಂತದ ನಿರ್ಬಂಧದಲ್ಲಿ ಒಳಗೊಳ್ಳಲಿದೆ ಎಂದು ಯೂನಿಯನ್ನ ಅಧ್ಯಕ್ಷ ರಾಷ್ಟ್ರ ಝೆಕ್ ಗಣರಾಜ್ಯ ಶುಕ್ರವಾರ ಹೇಳಿದೆ.

ಇಯು ಸದಸ್ಯ ರಾಷ್ಟ್ರಗಳು ಎಲ್ಲಾ ರಶ್ಯನ್ನರ ವೀಸಾಗಳನ್ನು ತಡೆಯುವುದು ಮತ್ತೊಂದು ಅತ್ಯಂತ ಪರಿಣಾಮಕಾರಿ ನಿರ್ಬಂಧವಾಗಲಿದೆ. ಈ ಬಗ್ಗೆ ಈ ತಿಂಗಳಾಂತ್ಯಕ್ಕೆ ಪ್ರೇಗ್ನಲ್ಲಿ ನಡೆಯಲಿರುವ ಇಯು ವಿದೇಶಾಂಗ ಸಚಿವರ ಅನಧಿಕೃತ ಸಭೆಯಲ್ಲಿ ಪ್ರಸ್ತಾವಿಸಲಾಗುವುದು  ಎಂದು ಝೆಕ್ ಗಣರಾಜ್ಯದ ವಿದೇಶಾಂಗ ಸಚಿವ ಜಾನ್ ಲಿಪಾವಸ್ಕಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ಮೇಲಿನ ಆಕ್ರಮಣವನ್ನು ರಶ್ಯ ಹೆಚ್ಚಿಸುತ್ತಲೇ ಬರುತ್ತಿರುವ ಈ ಸಂದರ್ಭದಲ್ಲಿ ರಶ್ಯದ ನಾಗರಿಕರಿಗೆ ಸಾಮಾನ್ಯ ರೀತಿಯ ಪ್ರವಾಸಕ್ಕೆ ಆಸ್ಪದ ನೀಡುವ ಕುರಿತ ಮಾತುಕತೆ ಸಾಧ್ಯವಿಲ್ಲ. ವೀಸಾ ನಿರ್ಬಂಧದ ಕ್ರಮವು ರಶ್ಯ ಸಮಾಜಕ್ಕೆ ಬಹಳ ಸ್ಪಷ್ಟ ಮತ್ತು ನೇರ ಸಂಕೇತವನ್ನು ರವಾನಿಸಲಿದೆ. ರಶ್ಯಾದ ಆಡಳಿತದ ಆಕ್ರಮಣಶೀಲತೆ ಮತ್ತು ರಶ್ಯಕ್ಕೆ ಯಾವುದೇ ಬೆದರಿಕೆ ಉಂಟುಮಾಡದ ಸ್ವತಂತ್ರ, ಪ್ರಜಾಪ್ರಭುತ್ವ ದೇಶಗಳ ವಿರುದ್ಧ ನಡೆಸುತ್ತಿರುವ ದ್ವೇಷಪೂರಿತ ನಡೆಯನ್ನು ಪಾಶ್ಚಿಮಾತ್ಯ ಜಗತ್ತು ಸಹಿಸುವುದಿಲ್ಲ ಎಂಬುದನ್ನು ಇದು ತೋರಿಸಲಿದೆ  ಎಂದವರು ಹೇಳಿದ್ದಾರೆ.

ರಶ್ಯವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಮರುದಿನ, ಅಂದರೆ ಫೆಬ್ರವರಿ ೨೫ರಂದೇ ಸಾಮಾನ್ಯ ರಶ್ಯನ್ನರಿಗೆ ವೀಸಾ ನೀಡುವುದನ್ನು ಝೆಕ್ ಗಣರಾಜ್ಯ ಸ್ಥಗಿತಗೊಳಿಸಿತ್ತು. ಆದರೆ ಬಹುತೇಕ ರಶ್ಯನ್ನರು ಫಿನ್ಲ್ಯಾಂಡ್ ಮೂಲಕ ಯುರೋಪ್ಗೆ ತೆರಳುತ್ತಿದ್ದಾರೆ. ಒಮ್ಮೆ ವೀಸಾ-ಮುಕ್ತ ಶೆಂಗೆನ್ ವಲಯ ಪ್ರವೇಶಿಸಿದರೆ, ರಶ್ಯನ್ನರು(ಗೂಢಚಾರರೂ ಸೇರಿದಂತೆ) ಬಹುತೇಕ ಯುರೋಪ್ನಾದ್ಯಂತ ಮುಕ್ತ ಪ್ರಯಾಣ ಮಾಡಬಹುದಾಗಿದೆ. ಕಳೆದ ವಾರ ರಶ್ಯನ್ನರಿಗೆ ಪ್ರವಾಸೀ ವೀಸಾ ನೀಡುವುದಕ್ಕೆ ಮಿತಿ ವಿಧಿಸುವ ನಿಯಮವನ್ನು ಫಿನ್‌ಲ್ಯಾಂಡ್ ಜಾರಿಗೊಳಿಸಿದೆ. ಈ ಮಧ್ಯೆ, ರಶ್ಯನ್ನರಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸುವಂತೆ ರಶ್ಯದ ನೆರೆದೇಶ ಎಸ್ತೋನಿಯಾ ಯುರೋಪಿಯನ್ ಯೂನಿಯನ್ ಅನ್ನು ಆಗ್ರಹಿಸಿದೆ.

ʼಯುರೋಪ್ಗೆ ಭೇಟಿ ನೀಡುವುದು ಒಂದು ಸೌಕರ್ಯವಾಗಿದೆ, ಮಾನವ ಹಕ್ಕಲ್ಲ' ಎಂದು ಎಸ್ತೋನಿಯಾದ ಪ್ರಧಾನಿ ಕಜಾ ಕಲ್ಲಸ್ ಟ್ವೀಟ್ ಮಾಡಿದ್ದಾರೆ. ರಶ್ಯದ ವಿರುದ್ಧ ಯುರೋಪಿಯನ್ ಯೂನಿಯನ್ ಇದುವರೆಗೆ ೬ ಹಂತದ ನಿರ್ಬಂಧ ಜಾರಿಗೊಳಿಸಿದೆ.

`ರಶ್ಯನ್ನರು ತಮ್ಮ ಸಿದ್ಧಾಂತವನ್ನು ಬದಲಿಸುವವರೆಗೆ ಅವರು ತಮ್ಮದೇ ಜಗತ್ತಿನಲ್ಲಿ ಕಾಲಕಳೆಯುವಂತೆ ಮಾಡಬೇಕು.  ಪಾಶ್ಚಿಮಾತ್ಯ ದೇಶಗಳು ಎಲ್ಲಾ ರಶ್ಯನ್ ಪ್ರಯಾಣಿಕರ ವಿರುದ್ಧ ನಿರ್ಬಂಧ ಜಾರಿಗೊಳಿಸಬೇಕು' ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ಕಳೆದ ವಾರ `ವಾಷಿಂಗ್ಟನ್ ಪೋಸ್ಟ್'ಗೆ ನೀಡಿದ್ದ ಸಂದರ್ಶನದಲ್ಲಿ ಆಗ್ರಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News