ಅಮೆರಿಕದಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ: ಬಿರು ಬಿಸಿಲಿಗೆ ರಸ್ತೆಯಲ್ಲೇ ಕುಸಿದು ಬಿದ್ದ ಕುದುರೆ

Update: 2022-08-12 16:21 GMT

ವಾಷಿಂಗ್ಟನ್, ಆ.೧೨: ಅಮೆರಿಕಾದ್ಯಂತ ತಾಪಮಾನ ಗರಿಷ್ಟ ಮಟ್ಟಕ್ಕೇರಿದ್ದು ಸುಡುವ ಬಿಸಿಲಿನ ತಾಪ ತಾಳಲಾರದೆ ಗಾಡಿ ಎಳೆಯುವ ಕುದುರೆಯೊಂದು ರಸ್ತೆಯಲ್ಲೇ ಕುಸಿದು ಬಿದ್ದಿರುವ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಘಟನೆ ಬುಧವಾರ ನಡೆದಿದೆ. 

ಸಾಂಪ್ರದಾಯಿಕ ಕುದುರೆ ಗಾಡಿಗಳು ನ್ಯೂಯಾರ್ಕ್ ಸಿಟಿಯ  ವೈಶಿಷ್ಟ್ಯವಾಗಿದೆ. ಮ್ಯಾನ್ಹಟನ್ನ ಹೆಲ್ಸ್ ಕಿಚನ್ ಪ್ರದೇಶದ ಡಬ್ಲೂ ೪೫ನೇ ರಸ್ತೆ ಮತ್ತು ೯ನೇ ಅವೆನ್ಯೂ ರಸ್ತೆ ಸಂಧಿಸುವ ಸ್ಥಳದಲ್ಲಿ ಕುದುರೆ ಕುಸಿದು ಬಿದ್ದಾಗ ಸ್ಥಳದಲ್ಲಿರುವವರು ಭೀತಿಯಿಂದ ಗಮನಿಸಿದರು  ಮತ್ತು ಪ್ರಾಣಿಪ್ರಿಯರು ಕುದುರೆಗಾಡಿಯನ್ನು ನಿಷೇಧಿಸುವಂತೆ ಆಗ್ರಹಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕುದುರೆ ನೆಲದ ಮೇಲೆ ಒರಗುತ್ತಿದ್ದಾಗ ಗಾಡಿ ಓಡಿಸುತ್ತಿದ್ದಾತ ಛಾವಟಿಯಿಂದ ಅದಕ್ಕೆ ಬಾರಿಸಿ ಮೇಲಕ್ಕೆ ಎಬ್ಬಿಸಲು ಪ್ರಯತ್ನಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳದಲ್ಲಿದ್ದವರು ೯೧೧ ನಂಬರ್ಗೆ ಕರೆ ಮಾಡಿದ ಮೇರೆಗೆ ನ್ಯೂಯಾರ್ಕ್ ಪೊಲೀಸ್ ಇಲಾಖೆ(ಎನ್ವೈಪಿಡಿ)ಯ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿದೆ. ` ನ್ಯೂಯಾರ್ಕ್ ನಗರದ ನಮ್ಮ ನಾಲ್ಕು ಕಾಲಿನ ಸ್ನೇಹಿತರ ಯೋಗಕ್ಷೇಮ ಮತ್ತು ಆರೋಗ್ಯವನ್ನು ಎನ್ವೈಪಿಡಿ  ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ತರಬೇತಿ ಪಡೆದ ಅಶ್ವಾರೋಹಿ ಅಧಿಕಾರಿಗಳು ಸಹಾಯ ಮಾಡಲು ಸಾಧ್ಯವಾಯಿತು ಎಂದು ತಿಳಿಸಲು ಸಂತೋಷವಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. ಕುದುರೆ ಅತ್ಯಂತ ನೋವಿನಿಂದ ರಸ್ತೆ ಮಧ್ಯೆ ಬಿದ್ದುಕೊಂಡಿರುವುದು ಮತ್ತು ಇಬ್ಬರು ಅಧಿಕಾರಿಗಳು ಪೈಪ್ನ ಮೂಲಕ ನೀರು ಚಿಮುಕಿಸುತ್ತಿರುವುದನ್ನೂ ವೀಡಿಯೊದಲ್ಲಿ ತೋರಿಸಲಾಗಿದೆ.

ಕುದುರೆ ನಿಧಾನವಾಗಿ ಏಳಲು ಪ್ರಯತ್ನಿಸುತ್ತಿರುವಾಗ ಅಲ್ಲಿ ಸೇರಿದ್ದವರು ಹರ್ಷೋದ್ಗಾರ ಮಾಡುತ್ತಿರುವುದನ್ನು ಮತ್ತೊಂದು ವೀಡಿಯೊ ತೋರಿಸಿದೆ. ಬಳಿಕ ಕುದುರೆಯನ್ನು  ಕುದುರೆಲಾಯಕ್ಕೆ ಕರೆತಂದು ಚಿಕಿತ್ಸೆ ಒದಗಿಸಿದ್ದು ಚೇತರಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಕುದುರೆ ಗಾಡಿಗಳ ಸಂಪ್ರದಾಯಕ್ಕೆ ಅಂತ್ಯ ಹಾಡುವಂತೆ ಹಲವು ಪ್ರಾಣಿದಯಾ ಸಂಘಟನೆಗಳು ಆಗ್ರಹಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News