ಚೀನಾದ 'ಗೂಢಚಾರ' ಹಡಗಿಗೆ ಶ್ರೀಲಂಕಾ ಬಂದರು ಭೇಟಿಗೆ ಅನುಮತಿ

Update: 2022-08-13 15:55 GMT

ಕೊಲಂಬೊ, ಆ.13: ಭಾರತದ ತೀವ್ರ ಆಕ್ಷೇಪ ಮತ್ತು ಆತಂಕದ ಮಧ್ಯೆಯೇ , ಚೀನಾದ ವಿವಾದಿತ ಸಂಶೋಧನಾ ನೌಕೆಗೆ ಹಂಬನ್ತೋಟ ಬಂದರಿಗೆ ಭೇಟಿ ನೀಡಲು ಶ್ರೀಲಂಕಾ ಸರಕಾರ ಶನಿವಾರ ಅನುಮತಿ ನೀಡಿದೆ ಎಂದು ವರದಿಯಾಗಿದೆ. ಚೀನಾದ ಯುವಾನ್ ವಾಂಗ್ 5 ನೌಕೆಯು ಸಂಶೋಧನಾ ಮತ್ತು ಸಮೀಕ್ಷೆ ಕಾರ್ಯದ ಹಡಗು ಆಗಿದ್ದು, ಆದರೆ ಇದನ್ನು ಅವಳಿ ಬಳಕೆಯ ಗೂಢಚಾರ ನೌಕೆಯಾಗಿಯೂ ಬಳಸಬಹುದು ಎಂದು ಅಂತರಾಷ್ಟ್ರೀಯ ಶಿಪ್ಪಿಂಗ್ ಮತ್ತು ವಿಶ್ಲೇಷಣಾ ಸೈಟ್ಗಳಲ್ಲಿ ಉಲ್ಲೇಖಿಸಲಾಗಿದೆ. ಈ ನೌಕೆಯು ಶ್ರೀಲಂಕಾದ ಬಂದರಿಗೆ ಬಂದರೆ ಅಲ್ಲಿಂದ ಭಾರತದ ಸೇನಾ ನೆಲೆಗಳ ಮೇಲೆ ಗೂಢಚಾರಿಕೆ ನಡೆಸಬಹುದಾಗಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿತ್ತು.

ಹಂಬನ್ತೋಟ ಬಂದರನ್ನು ಶ್ರೀಲಂಕಾ ಸರಕಾರ ಚೀನಾಕ್ಕೆ 99 ವರ್ಷಗಳ ಲೀಸ್ ಗೆ ನೀಡಿದೆ. ಈ ಬಂದರು ನಿರ್ಮಿಸಲು ಶ್ರೀಲಂಕಾ 1.4 ಬಿಲಿಯನ್ ಡಾಲರ್ ವೆಚ್ಚಮಾಡಿದ್ದರೆ, ಚೀನಾಕ್ಕೆ ಇದನ್ನು 1.12 ಬಿಲಿಯನ್ಗೆ ಲೀಸ್ಗೆ ನೀಡಿರುವ ಬಗ್ಗೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಂಬನ್ತೋಟ ಬಂದರಿಗೆ ಯುವಾನ್ ವಾಂಗ್ ನೌಕೆ ಆಗಸ್ಟ್ 11ರಂದು ಆಗಮಿಸಬೇಕಿತ್ತು. ಆದರೆ ಭಾರತದ ಆಕ್ಷೇಪದ ಬಳಿಕ, ನೌಕೆಯ ಭೇಟಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಸರಕಾರ ಬುಧವಾರ ಹೇಳಿಕೆ ನೀಡಿತ್ತು.

ಇದೀಗ ಚೀನಾದ ನೌಕೆ ಆಗಸ್ಟ್ 16ರಿಂದ 22ರವರೆಗೆ ಹಂಬನ್ತೋಟ ಬಂದರಿಗೆ ಭೇಟಿ ನೀಡಲು ವಿದೇಶಾಂಗ ಇಲಾಖೆ ಅನುಮತಿ ನೀಡಿದೆ . ಈಗ ಹಡಗು ಬಂದರಿನತ್ತ ಮುಂದುವರಿದಿದೆ ಎಂದು ಶ್ರೀಲಂಕಾ ಬಂದರು ಪ್ರಾಧಿಕಾರದ ಅಧ್ಯಕ್ಷ ನಿರ್ಮಲ್ ಪಿ ಸಿಲ್ವ ಹೇಳಿದ್ದಾರೆ. ಆರಂಭದಲ್ಲಿ ಚೀನಾದ ನೌಕೆ ಜುಲೈ 12ರಂದು ಹಂಬನ್ತೋಟಕ್ಕೆ ಆಗಮಿಸುವ ಕಾರ್ಯಕ್ರಮವಿತ್ತು. ಆದರೆ ಆಗ ಶ್ರೀಲಂಕಾದಲ್ಲಿ ಸರಕಾರ ವಿರೋಧಿ ಪ್ರತಿಭಟನೆ ಉತ್ತುಂಗದಲ್ಲಿದ್ದ ಕಾರಣ ಭೇಟಿಯನ್ನು ಮುಂದೂಡಲಾಗಿತ್ತು.

ಭಾರತದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗೆ ಸಂಬಂಧಿಸಿದ ಕ್ರಿಯೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ ಮತ್ತು ಇವನ್ನು ರಕ್ಷಿಸಲು ಎಲ್ಲಾ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News