ಕಾಬೂಲ್: ಪ್ರತಿಭಟನೆ ನಡೆಸಿದ ಮಹಿಳೆಯರನ್ನು ಥಳಿಸಿದ ತಾಲಿಬಾನ್

Update: 2022-08-13 15:59 GMT

ಕಾಬೂಲ್, ಆ.13: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಶನಿವಾರ ತಾಲಿಬಾನ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಥಳಿಸಲಾಗಿದೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನೆಯನ್ನು ಚದುರಿಸಲಾಗಿದೆ ಎಂದು ವರದಿಯಾಗಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡು ಆಗಸ್ಟ್ 15ಕ್ಕೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪ್ರತಿಭಟನಾಕಾರರು 'ಆಗಸ್ಟ್ 15 ಕರಾಳ ದಿನ' ಎಂಬ ಬ್ಯಾನರ್ ಹಿಡಿದುಕೊಂಡು, ಉದ್ಯೋಗದಲ್ಲಿ ಮತ್ತು ರಾಜಕೀಯದಲ್ಲಿ ಪಾಲ್ಗೊಳ್ಳುವ ತಮ್ಮ ಹಕ್ಕನ್ನು ಪ್ರತಿಪಾದಿಸಿ ಕಾಬೂಲ್ನಲ್ಲಿರುವ ಶಿಕ್ಷಣ ಇಲಾಖೆಯ ಎದುರು, ' ಆಹಾರ, ಉದ್ಯೋಗ ಮತ್ತು ಸ್ವಾತಂತ್ರ್ಯ' ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾ ರ್ಯಾಲಿ ನಡೆಸಿದರು.

ನಮ್ಮನ್ನು ಕಡೆಗಣಿಸಿರುವುದರಿಂದ ಬೇಸತ್ತಿದ್ದೇವೆ. ನಮಗೆ ನ್ಯಾಯ ಬೇಕು ಎಂದು ಸುಮಾರು 40ರಷ್ಟಿದ್ದ ಮಹಿಳೆಯರು ಘೋಷಣೆ ಕೂಗಿದರು. ಆಗ ತಾಲಿಬಾನ್ ಪಡೆ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದೆ. ಕೆಲವು ಮಹಿಳೆಯರು ಸಮೀಪದ ಅಂಗಡಿಯಲ್ಲಿ ಆಶ್ರಯ ಪಡೆದಾಗ ಅವರನ್ನು ಬೆನ್ನಟ್ಟಿದ ತಾಲಿಬಾನ್ ಪಡೆ, ಬಂದೂಕಿನ ಹಿಡಿಯಿಂದ ಅವರನ್ನು ಥಳಿಸಿದೆ.

ಪ್ರತಿಭಟನೆಯ ವರದಿ ಮಾಡುತ್ತಿದ್ದ ಕೆಲವು ಪತ್ರಕರ್ತರನ್ನೂ ಥಳಿಸಲಾಗಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. 1996ರಿಂದ 2001ರವರೆಗೆ ಅಫ್ಘಾನ್ನಲ್ಲಿ ಅಧಿಕಾರದಲ್ಲಿದ್ದ ತಾಲಿಬಾನ್ ಕೆಲವು ಕಠಿಣ ನಿರ್ಬಂಧ ಜಾರಿಗೊಳಿಸಿತ್ತು. ಆದರೆ ಕಳೆದ ವರ್ಷ 2ನೇ ಬಾರಿ ಅಧಿಕಾರಕ್ಕೆ ಬಂದಾಗ, ಈ ಬಾರಿ ಕಠಿಣ ನಿರ್ಬಂಧ ಹೇರದೆ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದರೂ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ನಿರಾಕರಣೆ ಸಹಿತ ಹಲವು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News