ಲೋಕ ಅದಾಲತ್; ಒಂದೇ ದಿನದಲ್ಲಿ 81 ಲಕ್ಷ ಪ್ರಕರಣ ಇತ್ಯರ್ಥ!

Update: 2022-08-14 01:43 GMT

ಹೊಸದಿಲ್ಲಿ: ದೇಶಾದ್ಯಂತ ಶನಿವಾರ ನಡೆದ ಮೂರನೇ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ದೆಹಲಿ ಹೊರತುಪಡಿಸಿದಂತೆ ಒಟ್ಟು 81 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ 18 ಲಕ್ಷ ಬಾಕಿ ಪ್ರಕರಣಗಳು ಮತ್ತು 63 ಲಕ್ಷ ದಾವೆ ಪೂರ್ವ ಪ್ರಕರಣಗಳು ಸೇರಿವೆ. ಒಟ್ಟು 5500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದೆ.

ದೇಶದ ವಿಚಾರಣಾ ನ್ಯಾಯಾಲಯಗಳಲ್ಲಿ 4.2 ಕೋಟಿ ಪ್ರಕರಣಗಳು ಬಾಕಿ ಇದ್ದು, ಈ ವರ್ಷ ಇದುವರೆಗೆ ನಿಯೋಜಿತ ಸಿಜೆಐ ಯು.ಯು.ಲಲಿತ್ ಅಧ್ಯಕ್ಷತೆಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ನಡೆದ ಮೂರು ರಾಷ್ಟ್ರೀಯ ಲೋಕ ಅದಾಲತ್‍ಗಳ ಮೂಲಕ 2.2 ಕೋಟಿ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಕೋವಿಡ್ ಸಂದರ್ಭದಲ್ಲಿ ಕೂಡಾ ಬಡವರಿಗೆ ಉಚಿತ ಕಾನೂನು ನೆರವು ಸೌಲಭ್ಯವನ್ನು ಜನಪ್ರಿಯಗೊಳಿಸುವಲ್ಲಿ ಮತ್ತು ಲೋಕ ಅದಾಲತ್‍ಗಳ ಮೂಲಕ ವ್ಯಾಜ್ಯ ಪರಿಹರಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದ ನ್ಯಾಯಮೂರ್ತಿ ಲಲಿತ್, ಇದಕ್ಕೆ ಪೂರ್ವಭಾವಿಯಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ಜತೆಗೆ ಹಲವಾರು ಪೂರ್ವಸಿದ್ಧತಾ ಸಭೆಗಳನ್ನು ನಡೆಸಿದ್ದರು. ದುಬಾರಿಯಲ್ಲದ ವ್ಯಾಜ್ಯ ನಿರ್ಣಯ ಪ್ರಕ್ರಿಯೆ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಅರ್ಜಿದಾರರಿಗೆ ಆಗುವ ಲಾಭದ ಬಗ್ಗೆ ಮನವರಿಕೆ ಮಾಡಿಕೊಡಲು ಮಾರ್ಗದರ್ಶನ ಮಾಡಲು ಸೂಚಿಸಿದ್ದರು.

"ನ್ಯಾಯದಾನ ವ್ಯವಸ್ಥೆಯಲ್ಲಿ ಲೋಕ ಅದಾಲತ್ ಇತಿಹಾಸ ಸೃಷ್ಟಿಸಿದ್ದು, ಪ್ರಕರಣಗಳ ತೃಪ್ತಿಕರ ಮತ್ತು ಸಕಾಲಿಕ ಇತ್ಯರ್ಥಕ್ಕೆ ದಾವೆದಾರರಿಗೆ ನೆರವಾಗಿದೆ. ಸೌಲಭ್ಯವಂಚಿತ ಮತ್ತು ದುರ್ಬಲ ವರ್ಗಕ್ಕೆ ನ್ಯಾಯ ಪಡೆಯುವ ಗವಾಕ್ಷಿಯಾಗಿ ಇದು ಮಾರ್ಪಟ್ಟಿದೆ" ಎಂದು ನ್ಯಾಯಮೂರ್ತಿ ಲಲಿತ್ ಹೇಳಿರುವುದಾಗಿ timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News