ಮೂವರು ಎಂವಿಎ ಅಗ್ರ ನಾಯಕರು ಈಗ ಆರ್ಥರ್ ಜೈಲಲ್ಲಿ ಸಹ ಕೈದಿಗಳು

Update: 2022-08-14 02:50 GMT

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ ಅಗಾಡಿಯ ಮೂವರು ಅಗ್ರ ನಾಯಕರು ಇದೀಗ ಮುಂಬೈನ ಆರ್ಥರ್ ಜೈಲಿನಲ್ಲಿ ಸಹ ಕೈದಿಗಳಾಗಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅನಿಲ್ ದೇಶಮುಖ್ ಹಾಗೂ ನವಾಬ್ ಮಲಿಕ್ ಹಾಗೂ ಶಿವಸೇನೆ ಮುಖಂಡ ಸಂಜಯ್ ರಾವುತ್ ಅವರು ಆರ್ಥರ್ ಜೈಲಿನಲ್ಲಿ ಬೇರೆ ಬೇರೆ ಬರಾಕ್‍ಗಳಲ್ಲಿ ಇದ್ದಾರೆ.

ರಾವುತ್ ಅವರನ್ನು ಇತ್ತೀಚೆಗೆ ಹಣ ದುರ್ಬಳಕೆ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಭದ್ರತಾ ಕಾರಣಗಳಿಂದಾಗಿ ಈ ಮೂವರು ನಾಯಕರನ್ನು ಆರ್ಥರ್ ಜೈಲಿನ ಪ್ರತ್ಯೇಕ ಸೆಲ್‍ಗಳಲ್ಲಿ ಕೂಡಿಹಾಕಲಾಗಿದೆ. ಅವರಿಗೆ ಟಿವಿ, ಕ್ಯಾರಮ್, ಪುಸ್ತಕಗಳು ಸೇರಿದಂತೆ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಮಲಿಕ್ ಅವರನ್ನು ಕಳೆದ ಫೆಬ್ರುವರಿಯಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಇದೀಗ ಚಿಕಿತ್ಸೆಗಾಗಿ ಕುರ್ಲಾದ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ತಿಂಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಇದ್ದಾರೆ. ಜೈಲಿನ ಇತರ ಕೈದಿಗಳಂತೆ ಈ ಮೂವರು ನಾಯಕರು ಕೂಡಾ ತಿಂಗಳಿಗೆ 6000 ರೂಪಾಯಿ ಮನಿ ಆರ್ಡರ್ ಪಡೆಯುತ್ತಿದ್ದು, ಜೈಲಿನ ಒಳಗೆ ಅವರು ಅಗತ್ಯ ವಸ್ತುಗಳನ್ನು ಖರೀದಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ : ಕೇವಲ ತ್ರಿವರ್ಣ ಧ್ವಜ ಹಾರಿಸಿದರೆ ನೀವು ದೇಶಭಕ್ತರಾಗುವುದಿಲ್ಲ: ಉದ್ಧವ್‌ ಠಾಕ್ರೆ ಹೇಳಿಕೆ

ಪಾತ್ರಾ ಚಾವಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿ ನಿರ್ದೇಶನಾಲಯ ರಾವುತ್ ಅವರನ್ನು ಆಗಸ್ಟ್ 1ರಂದು ಬಂಧಿಸಿ, ವಿಚಾರಣಾಧೀನ ಕೈದಿ (ನಂ. 8959) ಆಗಿ ಆರ್ಥರ್ ಜೈಲಿನಲ್ಲಿ ಇಡಲಾಗಿದೆ. ಭದ್ರತಾ ಕಾರಣಗಳಿಗಾಗಿ ಇವರನ್ನು ಪ್ರತ್ಯೇಕ ಬರಾಕ್‍ನಲ್ಲಿ ಕೂಡಿ ಹಾಕಲಾಗಿದೆ.

ಅವರ ಬೇಡಿಕೆಯಂತೆ ಜೈಲಧಿಕಾರಿಗಳು ಅವರಿಗೆ ಪುಸ್ತಕ ಹಾಗೂ ಪೆನ್ ಒದಗಿಸಿದ್ದಾರೆ. ಓದಲು ಜೈಲಿನ ಗ್ರಂಥಾಲಯದಿಂದ ಅವರು ಪುಸ್ತಕಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೈದಿಗಳು ಪುಸ್ತಕಗಳನ್ನು ಬರೆದರೂ, ಅವರ ಕೃತಿಗಳು ಜೈಲಿನ ಗಡಿಯಾಚೆ ಹೋಗುವುದಿಲ್ಲ. ಮುಂಬೈ ಕೋರ್ಟ್ ಅವಕಾಶ ನೀಡಿದಂತೆ ಇದೀಗ ಶಿವಸೇನೆ ಸಂಸದ ಮನೆ ಆಹಾರವನ್ನು ಪಡೆಯುತ್ತಿದ್ದಾರೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News