ಕಳ್ಳತನ ಶಂಕೆ: ಒಂಬತ್ತರ ಬಾಲಕನಿಗೆ ಪೊಲೀಸ್ ಸೇರಿ ಗುಂಪಿನಿಂದ ಚಿತ್ರಹಿಂಸೆ

Update: 2022-08-14 04:38 GMT

ಭೋಪಾಲ್: ಸೈಕಲ್ ಕಳ್ಳತನ ಮಾಡಿದ ಶಂಕೆಯಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬನನ್ನು ವಸತಿ ಪ್ರದೇಶದ ಬೀದಿಯಲ್ಲಿ ಅಡ್ಡಗಟ್ಟಿ, ಮಫ್ತಿಯಲ್ಲಿದ್ದ ಪೊಲೀಸ್ ಸೇರಿದಂತೆ ಬೈಕ್‍ನಲ್ಲಿ ಬಂದ ಕೆಲ ವ್ಯಕ್ತಿಗಳು ಅಮಾನುಷವಾಗಿ ಥಳಿಸಿ ಚಿತ್ರಹಿಂಸೆ ನೀಡಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಶುಕ್ರವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸಂಭವಿಸಿದೆ. ವಿಶೇಷ ಸಶಸ್ತ್ರ ಪಡೆಯ 6ನೇ ಬೆಟಾಲಿಯನ್‍ನ ಪೇದೆ ಅಶೋಕ್ ತಾಪಾ ಕೂಡಾ ಹಲ್ಲೆಕೋರರಲ್ಲಿ ಸೇರಿರುವುದನ್ನು ಪತ್ತೆ ಮಾಡಲಾಗಿದೆ ಎಂದು ಎಸ್ಪಿ ಸಿದ್ಧಾರ್ಥ ಬಹುಗುಣ ಹೇಳಿದ್ದಾರೆ.

ಪುಟ್ಟ ಬಾಲಕನನ್ನು ಬೈಕ್‍ನಲ್ಲಿ ಕುಳಿತ ವ್ಯಕ್ತಿಯೊಬ್ಬ ಹಿಡಿದುಕೊಂಡಿದ್ದಾನೆ. ಆಗ ಇತರ ಇಬ್ಬರು ಬೈಕ್‍ನಲ್ಲಿ ಆಗಮಿಸಿದರು. ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬ ಬಾಲಕನನ್ನು ತುಳಿಯುತ್ತಿದ್ದರೆ, ಟಿ-ಶರ್ಟ್ ಧರಿಸಿದ ಮತ್ತೊಬ್ಬ ವ್ಯಕ್ತಿ ಬಾಲಕನ ಕೂದಲು ಹಿಡಿದುಕೊಂಡು ಅಮಾನುಷವಾಗಿ ಥಳಿಸುತ್ತಿದ್ದಾನೆ. ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಲು ಯತ್ನಿಸಿದಾಗ, ಟಿ-ಶರ್ಟ್ ಧರಿಸಿದ ವ್ಯಕ್ತಿ ಆತನನ್ನು ದೂರಕ್ಕೆ ತಳ್ಳುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಿಸುತ್ತಿದೆ. ಹಲ್ಲೆ ನಡೆಸದಂತೆ ಮಹಿಳೆಯೊಬ್ಬರು ತಡೆಯುವ ಪ್ರಯತ್ನ ಮಾಡುತ್ತಿದ್ದು, ಬಾಲಕನನ್ನು ಬೈಕ್‍ನಲ್ಲಿ ಕುಳ್ಳಿರಿಸಿಕೊಂಡು ಬೈಕ್ ಹಿಂದಕ್ಕೆ ತೆಗೆದು ಜೋರಾಗಿ ಹೋಗುತ್ತಿರುವುದೂ ಕಂಡುಬಂದಿದೆ.

ರಂಜ್ಹಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ಪೇದೆಗೆ ನೋಟಿಸ್ ನೀಡಲಾಗಿದೆ.

"ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಮಸ್ತಾನಾ ಸ್ಕ್ವೇರ್ ಬಾಲಕನನ್ನು ಹಿಡಿದು ಹೊಡೆದಿದ್ದಾನೆ. ಆತನ ಮೇಲೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 323 (ಗಾಯಪಡಿಸಿದ್ದಕ್ಕೆ ಶಿಕ್ಷೆ), 294 (ಅಶ್ಲೀಲ ನಟನೆ ಹಾಗೂ ಹಾಡು) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 75ರ ಅನ್ವಯ ಪ್ರಕರಣ ದಾಖಲಾಗಿರುವುದಾಗಿ ಜಬಲ್ಪುರ ಎಸ್‍ಎಸ್‍ಪಿ ಪ್ರದೀಪ್ ಪಾಂಡೆ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News