ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ 108 ಅಡಿ ಎತ್ತರದ ರಾಷ್ಟ್ರಧ್ವಜ ಸ್ಥಾಪನೆ

Update: 2022-08-14 14:49 GMT

ಬಾರಾಮುಲ್ಲಾ,ಆ.14: ದೇಶದ 75ನೇ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಕೇಂದ್ರದ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಹೈದರ್‌ಬೇಗ್‌ನಲ್ಲಿ ರವಿವಾರ 108 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಸ್ಥಾಪಿಸಲಾಗಿದೆ. ಇದು ಉತ್ತರ ಕಾಶ್ಮೀರದಲ್ಲಿ ಇಂತಹ ಮೊದಲ ಧ್ವಜವಾಗಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಲೋ ಫೋರ್ಸ್‌ನ  ಜನರಲ್ ಕಮಾಂಡಿಂಗ್ ಅಧಿಕಾರಿ ಮೇಜರ್ ಜನರಲ್ ಎಸ್.ಎಸ್.ಸಲಾರಿಯಾ ಅವರು,ಇದೇ ಮೊದಲ ಬಾರಿಗೆ ಇಂತಹ ರಾಷ್ಟ್ರಧ್ವಜವನ್ನು ಉತ್ತರ ಕಾಶ್ಮೀರದಲ್ಲಿ ಸ್ಥಾಪಿಸಲಾಗಿದೆ. ಹರ್ ಘರ್ ತಿರಂಗಾ ಅಭಿಯಾನವನ್ನು ಮುಂದುವರಿಸುತ್ತಿರುವುದಕ್ಕಾಗಿ ಈ ಪ್ರದೇಶದ ಜನರಿಗೆ ತಾನು ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

ಇದಕ್ಕೂ ಮುನ್ನ ‘ಆಝಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಶ್ರೀನಗರದಲ್ಲಿ ಗಡಿ ಭದ್ರತಾ ಪಡೆಯ ಯೋಧರು ಆಯೋಜಿಸಿದ್ದ ತಿರಂಗಾ ರ್ಯಾಲಿಯ ನೇತೃತ್ವವನ್ನು ಉಪರಾಜ್ಯಪಾಲ ಮನೋಜ ಸಿನ್ಹಾ ವಹಿಸಿದ್ದರು.

ಶನಿವಾರ ಜಮ್ಮು-ಕಾಶ್ಮೀರ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್  ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಚಿನಾರ್ ಕಾರ್ಪ್ಸ್ ನ ಆಶ್ರಯದಲ್ಲಿ ಕಾಶ್ಮೀರದಲ್ಲಿ ಶಾಂತಿಯ ಸಂದೇಶವನ್ನು ನೀಡಲು ಲೈವ್ ಬ್ಯಾಂಡ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶುಕ್ರವಾರ ಸಿಆರ್‌ಪಿಎಫ್ ಬದ್ಗಾಮ್ ಪ್ರದೇಶದಲ್ಲಿ ಬೃಹತ್ ವಾಕ್ಥಾನ್ ರ್ಯಾಲಿಯನ್ನು ನಡೆಸಿತ್ತು.

ಹರ್ ಘರ್ ತಿರಂಗಾ ಅಭಿಯಾನದ ಆರಂಭದೊಂದಿಗೆ ಶನಿವಾರ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಬದರಿನಾಥ್‌ನಲ್ಲಿ ಸ್ಥಳೀಯರು ಮತ್ತು ಯಾತ್ರಾರ್ಥಿಗಳೊಂದಿಗೆ ತಿರಂಗಾ ಯಾತ್ರೆಯನ್ನು ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News