ಈಜಿಪ್ಟ್ ಚರ್ಚ್ ನಲ್ಲಿ ಬೆಂಕಿ: 41 ಮಂದಿ ಮೃತ್ಯು

Update: 2022-08-14 18:04 GMT
PHOTO SOURCE: Getty Images

ಕೈರೊ, ಆ.14: ಈಜಿಪ್ಟ್ ರಾಜಧಾನಿ ಕೈರೋದ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ನಲ್ಲಿ ರವಿವಾರ ಸಂಭವಿಸಿದ ಅಗ್ನಿದುರಂತದಲ್ಲಿ 41 ಮಂದಿ ಮೃತಪಟ್ಟಿರುವುದಾಗಿ ಚರ್ಚ್ ಆಡಳಿತ ತಿಳಿಸಿದೆ.

ಕೈರೋದ ವಾಯವ್ಯದ ಇಂಬಾಬಾ ಜಿಲ್ಲೆಯಲ್ಲಿರುವ ಅಬು ಸಿಫೈನ್ ಚರ್ಚ್‌ನಲ್ಲಿ ರವಿವಾರ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಅನಾಹುತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ . ಕಾಪ್ಟ್ ಎಂಬುದು ಮಧ್ಯಪ್ರಾಚ್ಯದ ಅತೀ ದೊಡ್ಡ ಕ್ರಿಶ್ಚಿಯನ್ ಸಮುದಾಯವಾಗಿದ್ದು ಈಜಿಪ್ಟ್ ನ 103 ಮಿಲಿಯನ್ ಜನರಲ್ಲಿ ಸುಮಾರು 10 ಮಿಲಿಯನ್ ಜನತೆ ಕಾಪ್ಟ್ ಸಮುದಾಯದವರು. ಈಜಿಪ್ಟ್ ನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ, ಅಲ್ಪಸಂಖ್ಯಾತರಾಗಿರುವ ಕಾಪ್ಟ್ ಕ್ರಿಶ್ಚಿಯನ್ನರ ಮೇಲೆ ದಾಳಿ, ಹಲ್ಲೆ ಹಾಗೂ ತಾರತಮ್ಯ ನಡೆಸಲಾಗುತ್ತಿದೆ ಎಂಬ ಆರೋಪವಿದೆ.
  
ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ದೇಶದ ಎಲ್ಲಾ ಸೇವೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅಧ್ಯಕ್ಷ ಅಬ್ದುಲ್ ಫತಾಹ್ ಅಲ್-ಸಿಸಿ ಘೋಷಿಸಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ. 2013ರಲ್ಲಿ ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಮೋರ್ಸಿಯನ್ನು ಈಗಿನ ಅಧ್ಯಕ್ಷ ಸಿಸಿಪದಚ್ಯುತಗೊಳಿಸಿದ ಬಳಿಕ ಮೋರ್ಸಿ ಬೆಂಬಲಿಗರು ಚರ್ಚ್, ಶಾಲೆ ಹಾಗೂ ಮನೆಗಳನ್ನು ಸುಟ್ಟುಹಾಕಿದ್ದಾರೆ. 

ಕಾಪ್ಟಿಕ್ ಕ್ರಿಶ್ಚಿಯನ್ನರ ಬಗ್ಗೆ ಮೃದುಧೋರಣೆ ಹೊಂದಿರುವ ಸಿಸಿ ಪ್ರತೀ ವರ್ಷ ಕಾಪ್ಟಿಕ್ ಕ್ರಿಸ್ಮಸ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಹೀಗೆ ಮಾಡಿದ ಈಜಿಪ್ಟ್ನ ಪ್ರಪ್ರಥಮ ಅಧ್ಯಕ್ಷರು ಎನಿಸಿಕೊಂಡಿದ್ದಾರೆ. ಅಲ್ಲದೆ, ಸಾಂವಿಧಾನಿಕ ನ್ಯಾಯಾಲಯದ ಮುಖ್ಯಸ್ಥರಾಗಿ ಕಾಪ್ಟಿಕ್ ಕ್ರಿಶ್ಚಿಯನ್ ನ್ಯಾಯಾಧೀಶರನ್ನು ನೇಮಕಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News