ರಾಯಲ್ ಲಂಡನ್ ಕ್ರಿಕೆಟ್; ಸತತ ಎರಡನೇ ಶತಕ ದಾಖಲಿಸಿದ ಚೇತೇಶ್ವರ ಪೂಜಾರ

Update: 2022-08-15 03:11 GMT

ಲಂಡನ್: ರಾಯಲ್ ಲಂಡನ್ ಏಕದಿನ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಸೆಕ್ಸ್(Sussex) ಪರ ಆಡುತ್ತಿರುವ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ರವಿವಾರ ನಡೆದ ಪಂದ್ಯದಲ್ಲಿ ಕೇವಲ 131 ಎಸೆತಗಳಲ್ಲಿ 174 ರನ್ ಸಿಡಿಸಿದ್ದಾರೆ. ಮೂರು ದಿನಗಳ ಹಿಂದೆ ಅವರು 79 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 107 ರನ್ ಗಳಿಸಿದ್ದರು.

ನಾಯಕ ಟಾಮ್ ಹೈನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಪೂಜಾರ, ಸರ್ರೆ (Surrey) ತಂಡದ ವಿರುದ್ಧದ ಪಂದ್ಯದಲ್ಲಿ ಸಸೆಕ್ಸ್ 3.2 ಓವರ್‌ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದ್ದಾಗ ಕ್ರೀಸ್‍ಗೆ ಬಂದರು. ತಂಡವನ್ನು ಅಪಾಯದಿಂದ ಪಾರು ಮಾಡಿದ ಪೂಜಾರ, ಮೂರನೇ ವಿಕೆಟ್‍ಗೆ ಟಾಮ್ ಕ್ಲರ್ಕ್ ಜತೆಗೆ 205 ರನ್ ಸೇರಿಸಿದರು. ಕ್ಲರ್ಕ್ 104 ರನ್ ಗಳಿಸಿ ಔಟ್ ಆದ ಬಳಿಕ ಪೂಜಾರ 103 ಎಸೆತಗಳಲ್ಲಿ ತಮ್ಮ ಶತಕ ಸಾಧಿಸಿದರು. ಶತಕದ ಬಳಿಕ ರನ್ ಗಳಿಕೆ ವೇಗ ಹೆಚ್ಚಿಸಿಕೊಂಡ ಅವರು ಬಳಿಕ ಕೇವಲ 28 ಎಸೆತಗಳಲ್ಲಿ 74 ರನ್ ಸಿಡಿಸಿದರು. ಅವರ ಇನಿಂಗ್ಸ್ ನಲ್ಲಿ 20 ಬೌಂಡರಿ ಹಾಗೂ 5 ಸಿಕ್ಸ‌ರ್‌ ಗಳು ಸೇರಿದ್ದವು.

ಪೂಜಾರ ಸಾಹಸದಿಂದಾಗಿ ಸಸೆಕ್ಸ್ ತಂಡ 50 ಓವರ್‌ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿತು. ದೊಡ್ಡ ಗುರಿ ಬೆನ್ನಟ್ಟಿದ ಸರ್ರೆ ಕೇವಲ 162 ರನ್‍ಗಳಿಗೆ ಆಲೌಟ್ ಆಗಿ 216 ರನ್‍ಗಳ ಹೀನಾಯ ಸೋಲು ಅನುಭವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News