ಬಿಹಾರದ ಯುವಕರಿಗೆ 10 ಲಕ್ಷ ಉದ್ಯೋಗ: ಸ್ವಾತಂತ್ರ್ಯ ದಿನಾಚರಣೆಯಂದು ನಿತೀಶ್ ಕುಮಾರ್ ಘೋಷಣೆ

Update: 2022-08-15 11:33 GMT
Photo:PTI

ಪಾಟ್ನಾ: ಬಿಹಾರದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ತೇಜಸ್ವಿ ಯಾದವ್ ಅವರ ಮಹತ್ವಾಕಾಂಕ್ಷೆಯ ಭರವಸೆಯನ್ನು ಬೆಂಬಲಿಸಿದ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar)ಅವರು ಇಂದು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಒಟ್ಟು ಉದ್ಯೋಗಾವಕಾಶಗಳು ಅಂತಿಮವಾಗಿ ದ್ವಿಗುಣಗೊಳ್ಳಬಹುದು ಎಂದು ಹೇಳಿದ್ದಾರೆ.

 ಪಾಟ್ನಾದ ಗಾಂಧಿ ಮೈದಾನದಲ್ಲಿಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರ್, ರಾಷ್ಟ್ರೀಯ ಜನತಾ ದಳ ಹಾಗೂ ಸಂಯುಕ್ತ ಜನತಾ ದಳ (ಜೆಡಿಯು) ಮೈತ್ರಿ ಸರಕಾರವು  ಕನಿಷ್ಠ 10 ಲಕ್ಷ ಸರಕಾರಿ ಉದ್ಯೋಗಗಳನ್ನು (10 Lakh Jobs) ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುವರಿ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಪರಿಕಲ್ಪನೆಯನ್ನು ಹೊಂದಿದೆ ಎಂದು ಹೇಳಿದರು.

"ರಾಜ್ಯದ ಮಕ್ಕಳಿಗೆ ಹೆಚ್ಚಿನ ಸರಕಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ತುಂಬಾ ಕೆಲಸ ಮಾಡುತ್ತೇವೆ . ನಾವು ಯಶಸ್ವಿಯಾದರೆ, ಈ ಸಂಖ್ಯೆಯನ್ನು 20 ಲಕ್ಷಕ್ಕೆ ಕೊಂಡೊಯ್ಯಲು  ಬಯಸುತ್ತೇವೆ. ಇದನ್ನು ಖಚಿತಪಡಿಸಿಕೊಳ್ಳಲು ಸರಕಾರ ಎಲ್ಲೆಡೆ ಶ್ರಮಿಸುತ್ತದೆ" ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪ್ರತಿಪಕ್ಷದಲ್ಲಿದ್ದಾಗ 2020 ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ 10 ಲಕ್ಷ ಉದ್ಯೋಗಗಳ ಚುನಾವಣಾ ಭರವಸೆಯ ಕುರಿತು ಪದೇ ಪದೇ ಪ್ರಸ್ತಾವಿಸಿದ್ದಾರೆ.  ಆರ್‌ಜೆಡಿ ಯುವ ನಾಯಕ ಈ ಹಿಂದೆ ತನ್ನ ಉದ್ಯೋಗ ಭರವಸೆಗೆ ಮುಖ್ಯಮಂತ್ರಿಯಿಂದ ಒಪ್ಪಿಗೆ ಸಿಕ್ಕಿದೆ ಎಂದು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News