ಸಮಾಜ ಒಡೆಯುವ ಶಕ್ತಿಯ ವಿರುದ್ಧ ಹೋರಾಡಬೇಕು: ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ

Update: 2022-08-15 10:48 GMT

ಕಾಪು : ಸಮಾಜದಲ್ಲಿ ಒಡೆಯುತ್ತಿರುವ ಶಕ್ತಿ ಮತಾಂಧತೆ, ಕೋಮುವಾದ, ಭಯೋತ್ಪಾದನೆ, ಅಸಮಾನತೆ, ಬಡತನ ಇದರ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿ ಇದೆ. ಅಮೃತ ಮಹೋತ್ಸವ ವರ್ಷಾಚರಣೆಯ ಮೂಲಕ ನವ ಭಾರತದ ಸಂಕಲ್ಪವನ್ನು ಸ್ವೀಕರಿಸಬೇಕಾಗಿದೆ ಎಂದು ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅಭಿಪ್ರಾಯಪಟ್ಟರು. 

ಕಾಪು ತಾಲೂಕು ಮಟ್ಟದ ರಾಷ್ಟ್ರೀಯ  ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸೋಮವಾರ ಆಜಾದಿ ಕಾ ಅಮೃತ್ ಮಹೋತ್ಸವ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮೋತ್ಸವಕ್ಕೆ ಪೂರಕವಾಗಿ ಭಾರತ ಸರಕಾರದ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಕಾಪು ತಾಲೂಕಿನಲ್ಲಿ ಉತ್ತಮ ಸ್ಪಂಧನೆ ದೊರಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯನ್ನು ದೇಶದಾದ್ಯಂತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುತ್ತಿದ್ದು ಎಲ್ಲರ ಸಹಕಾರದೊಂದಿಗೆ ಇದು ಸಾಧ್ಯವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ನೆನಪಿನಲ್ಲಿ ಕಾಪು ಕ್ಷೇತ್ರದಲ್ಲೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು. 

ಸನ್ಮಾನ: ಸಾಧಕರಾದ ನಾಟಿ ವೈದ್ಯೆ ಶಾಲಿನಿ, ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ,  ನಿವೃತ್ತ ಹಿರಿಯ ಸೈನಿಕ ಜೆರೋಮ್ ಕೊಮೋಡೋರ್ ಕೆಸ್ತಲಿನೋ ಮತ್ತು ಜಾನಪದ ಕಲಾವಿದ ಗುರುಚರಣ್ ಪೊಲಿಪು ಅವರನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯ ಸಾಧಕರನ್ನು ಗೌರವಿಸಲಾಯಿತು. ಫಲಾನುಭವಿಗಳಿಗೆ ಹಕ್ಕು ಪತ್ರ ಸಹಿತ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. 

ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ  ಸುಧಾಮ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಕಾಪು ವೃತ್ತ ನಿರೀಕ್ಷಕ ಕೆ. ಸಿ. ಪೂವಯ್ಯ, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್, ಕಾಪು ಎಸ್ಸೈ ಶ್ರೀಶೈಲ ಮುರಗೋಡ, ಶಿರ್ವ ಎಸ್ಸೈ ರಾಘವೇಂದ್ರ ಸಿ., ಪಡುಬಿದ್ರಿ ಎಸ್ಸೈ ಪುರುಷೋತ್ತಮ್, ಕಾಪು ಪುರಸಭಾ ಸದಸ್ಯರು, ವಿವಿಧ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News