ಸ್ವಾತಂತ್ರ್ಯ ಹೋರಾಟದ ಶ್ರಮ ಅರಿತಾಗ ದೇಶ ನಿರಂತರ ಜಾಗೃತಿಯಿಂದ ಇರಲು ಸಾಧ್ಯ: ಕೆ.ರಾಜು

Update: 2022-08-15 13:28 GMT

ಕುಂದಾಪುರ, ಆ.15: ಸ್ವಾತಂತ್ರ್ಯದ ಹೋರಾಟವನ್ನು ಪ್ರತಿಯೊಬ್ಬ ಭಾರತೀ ಯರ ಹೋರಾಟವನ್ನಾಗಿ ಮಾರ್ಪಡಿಸಿದ ಗಾಂಧೀಜಿಯವರಿಂದ ಹಿಡಿದು ದಿನನಿತ್ಯ ಕೃತಜ್ಞತೆ ಸಲ್ಲಿಸುವ ಸಾವಿರಾರು ಸ್ಫೂರ್ತಿಯುತ ಹೋರಾಟಗಾರರು ನಮ್ಮ ಭಾರತದ ಹೆಮ್ಮೆ. ಇವರ ತ್ಯಾಗ-ಬಲಿದಾನ ಮತ್ತು ಆತ್ಮಗೌರವದ ಬಗ್ಗೆ ಮುಂದಿನ ಜನಾಂಗಗಳಿಗೆ ತಿಳಿಸಿದಾಗ ಮಾತ್ರ ದೇಶದ ಪ್ರಖ್ಯಾತಿ, ವೈಭವ ನಿರಂತರ ಜಾಗೃತಿಯಿಂದ ಇರಲು ಸಾಧ್ಯ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಹೇಳಿದ್ದಾರೆ.

ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಕೋಟ್ಯಂತರ ಭಾರತೀಯರು ನೂರಾರು ವರ್ಷಗಳ ಕಾಲ ಸ್ವಾತಂತ್ರ್ಯದ ಸೂರ್ಯೋದಯಕ್ಕೆ ಕಾತರಿಸಿದ್ದು, ಮತ್ತು ಅಸಂಖ್ಯಾತ ಜನರ ಹೋರಾಟ, ತ್ಯಾಗವನ್ನು ಸ್ಮರಿಸಿದರೆ ಅಮೃತ ಮಹೋತ್ಸವದ ಮಹತ್ವ ಅರಿವಾಗು ತ್ತದೆ. ಸ್ವತಂತ್ರ ಭಾರತದ ೭೫ ವರ್ಷಗಳ ಯಾತ್ರೆಯೂ ಸಹ ಕಠಿಣ ಶ್ರಮ ಆಶಯ ಮತ್ತು ಅನ್ವೇಷಣೆಗಳೊಂದಿಗೆ ಸಾಗಿ ಬಂದಿದೆ. ಹತ್ತು ಹಲವು ಕ್ಷೇತ್ರಗಳಲ್ಲಿ ಭಾರತದ ಸಾಧನೆ ವಿಶ್ವದ ಗಮನ ಸೆಳೆದಿದೆ ಎಂದರು.

ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಕೆ.ಗೋಪಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಡಿವೈಎಸ್ಪಿಶ್ರೀಕಾಂತ್ ಕೆ., ಕುಂದಾಪುರ ತಾಪಂ ಇಒ ಮಹೇಶ್ ಹೊಳ್ಳ, ತಾಲೂಕು ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್. ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ನಗರ ವ್ಯಾಪ್ತಿಯ ಶಾಲಾ- ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕುಂದಾಪುರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಕುಂದಾಪುರದ ಜೂನಿಯರ್ ಕಾಲೇಜಿನಿಂದ ಗಾಂಧಿ ಮೈದಾನದವರೆಗೆ ನಡೆದ ವಿವಿಧ ತಂಡಗಳ ಬೃಹತ್ ಮೆರವಣಿಗೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಚಾಲನೆ ನೀಡಿದರು.

ಪಥ ಸಂಚಲನದಲ್ಲಿ ಪೌರಕಾರ್ಮಿಕರ ತಂಡ!

ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪಥ ಸಂಚಲನದಲ್ಲಿ ಪೊಲೀಸ್, ವಿದ್ಯಾರ್ಥಿಗಳ ತಂಡದ ಜೊತೆ ಪುರಸಭೆಯ ಪೌರಕಾರ್ಮಿಕರ ತಂಡ ಕೂಡ ಭಾಗವಹಿಸುವ ಮೂಲಕ ವಿಶಿಷ್ಟ ಆಕರ್ಷಣೆಯಾಗಿತ್ತು.

ಕುಂದಾಪುರ ಎಸ್‌ಐ ಸದಾಶಿವ ಗವರೋಜಿ ಕಮಾಂಡ್ ನೀಡಿದರು. ಪೊಲೀಸ್ ತಂಡ, ಗೃಹ ರಕ್ಷಕದಳ, ಸೈಂಟ್ ಸೈಂಟ್ ಮೇರಿಸ್, ವೆಂಕಟರಮಣ, ಸೈಂಟ್ ಜೋಸೆಫ್, ಹೋಲಿ ರೋಜರಿ ಶಿಕ್ಷಣ ಸಂಸ್ಥೆಗಳ, ವಡೇರಹೋಬಳಿ ಶಾಲೆ, ಬಾಲಕಿಯರ ಶಾಲೆಗಳ ಎನ್‌ಸಿಸಿ, ಸ್ಕೌಟ್- ಗೈಡ್ಸ್ ತಂಡಗಳ ಬಳಿಕ ಸಾಗಿಬಂದ ಪೌರ ಕಾರ್ಮಿಕರ ತಂಡ ಎಲ್ಲರ ಗಮನ ಸೆಳೆಯಿತು. ಪೌರ ಕಾರ್ಮಿಕರು ಸಮವಸ್ತ್ರ ಧರಿಸಿ, ರಾಷ್ಟ್ರಧ್ವಜ ಹಿಡಿದು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಇವರಿಗೆ ಮೈದಾನವಿಡೀ ಘೋಷಣೆ ಸಹಿತ, ಚಪ್ಳಾಳೆ ನೀಡಿ ಗೌರವಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News