ಟಿಪ್ಪು, ಸಾವರ್ಕರ್‌ರನ್ನು ಹೋಲಿಕೆ ಮಾಡಿಕೊಂಡು ಅಶಾಂತಿ ಸೃಷ್ಟಿಸುವ ಪ್ರಯತ್ನ: ಸಚಿವ ಸುನೀಲ್ ಕುಮಾರ್

Update: 2022-08-15 13:53 GMT
ಸಚಿವ ಸುನೀಲ್ ಕುಮಾರ್

ಉಡುಪಿ: ಸಾವರ್ಕರ್ ದೇಶ ಭಕ್ತ ಹಾಗೂ ಸ್ವಾತಂತ್ರ್ಯ ಸೇನಾನಿ. ಸಾವರ್ಕರ್ ಬಗ್ಗೆ ಆಕ್ಷೇಪಣೆ ಸಲ್ಲಿಸುವುದು ಅಂದರೆ ಸ್ವಾತಂತ್ರ್ಯಕ್ಕೆ ಆಕ್ಷೇಪಣೆ ಸಲ್ಲಿಸದಂತೆ ಆಗುತ್ತದೆ. ಆದುದರಿಂದ ಸಾವರ್ಕರ್ ಭಾವಚಿತ್ರಕ್ಕೆ ಆಕ್ಷೇಪಣೆ ಸಲ್ಲಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ಕರಿನೀರಿನ ಶಿಕ್ಷೆ ಅನುಭವಿಸಿದ ದೊಡ್ಡ ಹೋರಾಟಗಾರ ಸಾವರ್ಕರ್. ಅಂಡಮಾನ್ ಜೈಲಿನ ಪರಿಸ್ಥಿತಿ ನೋಡಿದರೆ ಇವರ ಬಗ್ಗೆ ತಿಳಿಯುತ್ತದೆ. ಆದುದರಿಂದ ಇವರನ್ನು ಇಡೀ ಸಮಾಜ ಗೌರವಿಸಬೇಕು ಮತ್ತು ಪುರಸ್ಕರಿಸಬೇಕು ಎಂದರು.

ಪಿಎಫ್‌ಐ ಸಂಘಟನೆ ಸಾವರ್ಕರ್ ಅವರನ್ನು ವಿರೋಧಿಸುತ್ತದೆ ಎಂಬ ಕಾರಣಕ್ಕೆ ಇಡೀ ರಾಜ್ಯದಲ್ಲಿ ಹಾಕಿರುವ ಅವರ ಪೋಸ್ಟರ್‌ಗಳನ್ನು ತೆಗೆಯಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತವಾದ ಷಡ್ಯಂತರ. ಟಿಪ್ಪು ಮತ್ತು ಸಾವರ್ಕರ್ ಅವರನ್ನು ಹೋಲಿಕೆ ಮಾಡಿಕೊಂಡು ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಪಿಎಫ್‌ಐ ಎಲ್ಲ ಕಡೆ ಮಾಡುತ್ತಿದೆ ಎಂದು ಸುನೀಲ್ ಕುಮಾರ್ ಆರೋಪಿಸಿದರು.

ಪಿಎಫ್‌ಐ ಯಾವುದೋ ಸಣ್ಣ ಘಟನೆಯನ್ನು ಕೇಂದ್ರೀಕೃತವಾಗಿಟ್ಟುಕೊಂಡು ಅಶಾಂತಿ ಸೃಷ್ಠಿಸುವ ಪ್ರಯತ್ನಗಳು ಎಲ್ಲ ಕಡೆಗಳಲ್ಲಿ ನಡೆಸುತ್ತಿದೆ. ಇವರನ್ನು ಸರಕಾರ ಹದ್ದುಬಸ್ತಿನಲ್ಲಿ ಇಡುವ ಕೆಲಸ ಮಾಡುತ್ತದೆ. ಪೊಲೀಸರು ಶಿವಮೊಗ್ಗ ಘಟನೆಯ ಬಗ್ಗೆ ಬಹಳ ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.

ಶಿವಮೊಗ್ಗ, ಸುರತ್ಕಲ್ ಘಟನೆಯನ್ನು ಮುಂದಿಟ್ಟುಕೊಂಡು ಪೂರ್ವಯೋಜಿತವಾಗಿ ಸಾವರ್ಕರ್ ಹಾಗೂ ಟಿಪ್ಪುವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಪಿಎಫ್‌ಐ ಮಾಡುತ್ತಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News